ಲೈಂಗಿಕ ಕಿರುಕುಳ: ಭೂಷಣ್ ವಿರುದ್ಧ ೨ ಎಫ್‌ಐಆರ್

ನವದೆಹಲಿ,ಜೂ.೨- ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿರುವ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಕುರಿತಂತೆ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ೨ ಎಫ್‌ಐಆರ್ ದಾಖಲಾಗಿದೆ.
ಬ್ರಿಜ್‌ಭೂಷಣ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಹಿಳಾ ಕುಸ್ತಿಪಟುಗಳು ನಿರಂತರ ಪ್ರತಿಭಟನೆ ನಡೆಸಿ ತಾವು ಗಳಿಸಿದ್ದ ಪದಕಗಳನ್ನು ಗಂಗಾನದಿಗೆ ಬಿಸಾಡಲು ಮುಂದಾಗಿ ಆಕ್ರೋಶ ಹೊರಹಾಕಿದ್ದರು.
ಈ ಪ್ರತಿಭಟನೆಯ ಆಕ್ರೋಶದ ಕಿಚ್ಚಿಗೆ ಮಣಿದು ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ನಲ್ಲಿ ಬ್ರಿಜ್ ಭೂಷಣ್ ವಿರುದ್ದ ಅನುಚಿತ ವರ್ತನೆ, ಬೆದರಿಕೆ, ಲೈಂಗಿಕ ಕಿರುಕುಳ,ಮಾನಸಿಕ ಹಿಂಸೆ ಮತ್ತು ಹಿಂಬಾಲಿಸುವಿಕೆ ಕುರಿತು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಏಳು ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನನ್ವಯ ಪ್ರಥಮ ಮಾಹಿತಿಯನ್ನು ಏಪ್ರಿಲ್ ೨೮ ಮತ್ತು ಲಿಖಿತ ದೂರುಗಳನ್ನು ಏಪ್ರಿಲ್ ೨೧ ರಂದು ಸಲ್ಲಿಸಲಾಗಿದೆ. ಅದರಲ್ಲಿ ಮಹಿಳಾ ಕ್ರೀಡಾಪಟುಗಳು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಮಹಿಳಾ ಅಥ್ಲೀಟ್‌ಗಳೊಂದಿಗೆ ಅನುಚಿತವಾಗಿ ವರ್ತಿಸಿ ಮೈ ಕೈ ಮುಟ್ಟಿದ್ದಾರೆ. ಎದೆಯ ಭಾಗವನ್ನು ಅನೇಕ ಬಾರಿ ಸ್ಪರ್ಶಿಸಿದ್ದಾರೆ. ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕತೆಗೆ ಒತ್ತಾಯಿಸಿದ ಆರೋಪವನ್ನೂ ಕುಸ್ತಿಪಟುಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಂದ್ಯಾವಳಿಯ ಸಮಯದಲ್ಲಿ ಉಂಟಾದ ಗಾಯಗಳಿಗೆ ಚಿಕಿತ್ಸೆ ನೀಡುವ ಬದಲು ಅದನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆಹಾರ ನೀಡುವಾಗ ಆಹಾರ ತಜ್ಞರು ಅಥವಾ ತರಬೇತುದಾರರು ಅನುಮೋದಿಸಿಲ್ಲ” ಎಂದು ಮಹಿಳಾ ಕುಸ್ತಿಪಟುಗಳು ಗಂಭೀರ ಆರೋಪ ಮಾಡಿದ್ದಾರೆ.
ದೂರುದಾರರು ವೀಡಿಯೊ ರೆಕಾರ್ಡ್ ಮಾಡಲು ಬಳಸಿದ ಸಾಧನ ಮತ್ತೆ ಆನ್ ಮತ್ತು ಆಫ್ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆರೋಪಿಗಳಿಗೆ ಅನುಕೂಲವಾಗುವಂತೆ ಸಂಪೂರ್ಣ ಹೇಳಿಕೆ ದಾಖಲಿಸಿಲ್ಲ ಎಂದು ಮಹಿಳಾ ಕ್ರೀಡಾಪಟು ದೂರಿದ್ಧಾರೆ.
ಆರೋಪಿ ಬ್ರಿಜ್ ಭೂಷಣ್ ಸಿಂಗ್ ಕಿರುಕುಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎಲ್ಲಾ ಮಹಿಳಾ ಕುಸ್ತಿಪಟುಗಳು ಜೊತೆಯಾಗಿ ಕೊಠಡಿ ತೊರೆಯುತ್ತಿದ್ದೆವು ಮತ್ತು ಜೊತೆಯಾಗಿ ಓಡಾಡುತ್ತಿದ್ದೆವು ಎಂದು ಇನ್ನೊಬ್ಬ ಕುಸ್ತಿಪಟು ಹೇಳಿದ್ದಾರೆ.
ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಸಿಂಗ್, ಟಿ-ಶರ್ಟ್ ಎಳೆದು ಹೊಟ್ಟೆ ಕೆಳಗೆ ಹೊಕ್ಕುಳದ ಮೇಲೆ ಕೈ ಹಾಕಿದರು” ಎಂದು ಮತ್ತೊಬ್ಬ ದೂರುದಾರು ದೂರಿದ್ದಾರೆ.
ವಿದೇಶದಲ್ಲಿ ಸ್ಪರ್ಧೆಯ ಸಂದರ್ಭದಲ್ಲಿ ಗಾಯಗೊಂಡಾಗ, ಲೈಂಗಿಕ ಬೇಡಿಕೆಗೆ ಸ್ಪಂದಿಸಿದರೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಒಕ್ಕೂಟವೇ ಭರಿಸಲಿದೆ ಎಂದು ಹೇಳಿರುವುದನ್ನು ಉಲ್ಲೇಖಿಸಲಾಗಿದೆ.
ಚಾಪೆಯ ಮೇಲೆ ಮಲಗಿರುವಾಗ, ಆರೋಪಿ ಸಿಂಗ್ ಬಳಿಗೆ ಬಂದು ನನ್ನ ಎದೆಯ ಭಾಗವನ್ನು ಹಲವಾರು ಬಾರಿ ಮುಟ್ಟಿ ಕಿರುಕುಳ ನೀಡಿದ್ದಾರೆ ಎಂದು ಪ್ರಶಸ್ತಿ ವಿಜೇತ ಮತ್ತೊಬ್ಬ ಕುಸ್ತಿಪಟು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಬೇಡಿಕೆಗೆ ಸ್ಪಂದಿಸಿದರೆ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲವನ್ನೂ ಸಾಮಗ್ರಿ ನೀಡುತ್ತಿದ್ದರು ಇಲ್ಲದಿದ್ದರೆ ಏನೂ ನೀಡುತ್ತಿರಲಿಲ್ಲ ಎಂಬ ಗುರುತರ ಆರೋಪಗಳು ಕೇಳಿ ಬರುತ್ತಿವೆ.

ಆರೋಪ ನಿರಾಕರಣೆ:
ಆರು ಕುಸ್ತಿಪಟುಗಳ ದೂರುಗಳನ್ನು ಸಂಯೋಜಿಸಿ, ಮತ್ತು ಅಪ್ರಾಪ್ತ ವಯಸ್ಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರತ್ಯೇಕ ಒಂದು ಏಪ್ರಿಲ್ ೨೮ ರಂದು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ದದ ಲೈಂಗಿಕ ದೌರ್ಜನ್ಯದ ಎಲ್ಲಾ ಆರೋಪಗಳನ್ನು ನಿರಾಕರಿದ್ದು ಇದೀಗ ಮತ್ತೊಮ್ಮೆ ಎಲ್ಲಾ ಆರೋಪ ಅಲ್ಲಗಳೆದಿದ್ಧಾರೆ.
ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ, ಕುಸ್ತಿಪಟುಗಳ ಬಳಿ ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ ಎಂದಿದ್ದಾರೆ.