ಲೈಂಗಿಕ ಕಿರುಕುಳ ಪ್ರಕರಣ: ತನಿಖೆಗೆ ಆದೇಶ

ನವದೆಹಲಿ, ಜ.೧೯- ಬಿಜೆಪಿ ಸಂಸದ, ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ತನಿಖೆಗೆ ಸಮಿತಿ ರಚಿಸಿ, ಕೇಂದ್ರ ಕ್ರೀಡಾ ಸಚಿವಾಲಯ ಆದೇಶಿಸಿದೆ.

ಈ ತನಿಖಾ ಸಮಿತಿಯಲ್ಲಿ ಇಬ್ಬರು ಮಹಿಳಾ ಪ್ರತಿನಿಧಿಗಳು ಇರಲಿದ್ದಾರೆ. ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸಿ ಶೀಘ್ರದಲ್ಲಿಯೇ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಒಲಿಂಪಿಯನ್ ವಿನೇಶ್ ಫೋಗಟ್, ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಕ್ರೀಡಾ ಸಂಸ್ಥೆಯ ತರಬೇತುದಾರರು ಹಾಗೂ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ನಂತರ ಕ್ರೀಡಾ ಸಚಿವಾಲಯವು ಮುಂದಿನ ೭೨ ಗಂಟೆಗಳ ಒಳಗೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ನಿಂದ ಪ್ರತಿಕ್ರಿಯೆಯನ್ನು ಕೋರಿದೆ.

ಇನ್ನೂ, ಫೋಗಟ್ ಅವರು ಭಾರತದ ಇತರ ಅಗ್ರ ಕುಸ್ತಿಪಟುಗಳೊಂದಿಗೆ ಬುಧವಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ರನ್ನು ವಜಾಗೊಳಿಸುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.