ಲೈಂಗಿಕ ಕಿರುಕುಳ ಆರೋಪ ನಿರಾಧಾರ

ನವದೆಹಲಿ,ಜ.೨೦:ಮಹಿಳಾ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿ ದೇಶದ ಖ್ಯಾತನಾಮ ಕುಸ್ತಿಪಟುಗಳು ನಡೆಸಿರುವ ಪ್ರತಿಭಟನೆಗೆ ಸರ್ಕಾರದಿಂದ ಸೂಕ್ತಸ್ಪಂದನೆ ಸಿಕ್ಕಿಲ್ಲ. ಇವರ ಆರೋಪಗಳು ನಿರಾಧಾರ, ಅಧ್ಯಕ್ಷ ಬ್ರಿಜ್‌ಭೂಷಣ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಕುಸ್ತಿ ಫೆಡರೇಷನ್ ಪ್ರತಿಪಾದಿಸಿದೆ.ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರ ವಿರುದ್ಧ ಮಾಡಿರುವ ಆರೋಪ ಹುರುಳಿಲ್ಲ. ಇವೆಲ್ಲ ರಾಜಕೀಯ ಪ್ರೇರಿತ ಆರೋಪ ಎಂದು ಭಾರತೀಯ ಕುಸ್ತಿ ಫೆಡರೇಷನ್ ವಾದಿಸಿದೆ. ಹಾಗಾಗಿ, ಕುಸ್ತಿಪಟುಗಳು ಹಾಗೂ ಕುಸ್ತಿ ಪೇಡರೇಷನ್ ನಡುವಿನ ಜಟಾಪಟಿ ಮುಂದುವರೆದಿದೆ.ಕುಸ್ತಿಪಟುಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಕುಸ್ತಿ ಫೆಡರೇಷನ್‌ನನ ತುರ್ತು ಸಭೆ ನಡೆಸಿದ್ದು, ಇಂದು ಕುಸ್ತಿಪಟುಗಳ ಆರೋಪಕ್ಕೆ ಸ್ಪಷ್ಟನೆ ನೀಡಲಿದ್ದು, ಆರೋಪಗಳನ್ನು ಕುಸ್ತಿ ಫೆಡರೇಷನ್ ತಳ್ಳಿ ಹಾಕಲಿದೆ ಎಂದು ಹೇಳಲಾಗಿದೆ.
ಮಹಿಳಾ ಕುಸ್ತಿಪಟುಗಳಿಗೆ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್‌ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಾಮನ್‌ವೆಲ್ತ್ ಪದಕ ವಿಜೇತೆ ಕುಸ್ತಿಪಟು ಅನ್ಶು ಮಲ್ಲಿಕ್ ಆರೋಪಿಸಿ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಇತರ ಕುಸ್ತಿಪಟುಗಳೊಂದಿಗೆ ಧರಣಿ ನಡೆಸಿದ್ದು, ಧರಣಿ ೨ನೇ ದಿನವಾದ ಇಂದು ಮುಂದುವರೆದಿದೆ. ಈ ಧರಣಿಯಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ರವಿ ದಹಿಯಾ, ವಿಜೇಂಧರ್‌ಸಿಂಗ್, ಭಜರಂಗ್‌ಕುನಿಯಾ, ಸಾಕ್ಷಿಮಲ್ಲಿಕ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶಪೊಗೆಟ್ ಸೇರಿದಂತೆ ಎಲ್ಲ ಖ್ಯಾತನಾಮ ಕುಸ್ತಿಪಟುಗಳು ಭಾಗಿಯಾಗಿದ್ದಾರೆ.ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗೆ ನಿನ್ನೆ ರಾತ್ರಿ ಕೇಂದ್ರದ ಕ್ರೀಡಾ ಸಚಿವ ಅನುರಾಗ್‌ಸಿಂಗ್ ಠಾಕೂರ್ ಸಭೆ ನಡೆಸಿದರಾದರೂ ಸಭೆಯಲ್ಲಿ ಯಾವುದೇ ತೀರ್ಮಾನವನ್ನು ಕೈಗೊಳ್ಳಲು ಆಗಲಿಲ್ಲ. ಇಂದೂ ಸಹ ಕೇಂದ್ರ ಕ್ರೀಡಾ ಸಚಿವರು ಧರಣಿ ನಿರತ ಕುಸ್ತಿಪಟುಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.ಕೇಂದ್ರ ಸರ್ಕಾರ ತಕ್ಷಣವೇ ಭಾರತೀಯ ಕುಸ್ತಿ ಫೆಡರೇಷನ್‌ನ ಆಡಳಿತ ಮಂಡಳಿಯನ್ನು ವಜಾ ಮಾಡಬೇಕು ಎಂಬ ಪಟ್ಟನ್ನು ಕುಸ್ತಿಪಟುಗಳು ಸಡಿಲಿಸಿಲ್ಲ. ನಿನ್ನೆ ತಡರಾತ್ರಿ ೧.೪೫ರವರೆಗೂ ಅನುರಾಗ್‌ಠಾಕೂರ್ ಅವರ ನಿವಾಸದಲ್ಲಿ ಸಭೆ ನಡೆಯಿತಾದರೂ ಸಭೆಯಲ್ಲಿ ಒಮ್ಮತ ಮೂಡಲಿಲ್ಲ.ಇಂದೂ ಸಹ ಕುಸ್ತಿಪಟುಗಳ ಜತೆ ಕ್ರೀಡಾ ಸಚಿವರ ಸಭೆ ನಡೆಯಲಿದೆ. ಕುಸ್ತಿಪಟಿಗಳ ಆರೋಪವನ್ನು ಭಾರತೀಯ ಕುಸ್ತಿ ಫೆಡರೇಷನ್ ತಳ್ಳಿ ಹಾಕಿದ್ದು, ಈ ಬಗ್ಗೆ ಕುಸ್ತಿಪಟುಗಳಿಗೆ ಸಂಜೆ ವಿವರಣೆ ನೀಡಲಿದೆ ಎಂದು ಹೇಳಲಾಗಿದೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ರಾಜೀನಾಮೆ ಜತೆಗೆ ಅವರ ವಿರುದ್ಧ ಕಾನೂನುಕ್ರಮ ಆಗಬೇಕು ಎಂಬುದು ನಮ್ಮ ಬೇಡಿಕೆ. ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್‌ನ್ನೂ ದಾಖಲಿಸುತ್ತೇವೆ ಎಂದೂ ಪ್ರತಿಭಟನೆಯಲ್ಲಿ ತೊಡಗಿರುವ ಒಲಿಂಪಿಯನ್ ಪದಕ ವಿಜೇತೆ ವಿನೇಶಪೊಗೆಟ್ ಹೇಳಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪ ಸುಳ್ಳು ಎಂದಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್‌ಸಿಂಗ್ ಇದು ರಾಜಕೀಯ ಕುತಂತ್ರ ಎಂದಿದ್ದಾರೆ.
ಮಹಿಳಾ ಕುಸ್ತಿಪಟುಗಳ ಆರೋಪ ಹುರುಳಿಲ್ಲ, ಕುಸ್ತಿಪಟುಗಳ ಪ್ರತಿಭಟನೆ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಇದನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.ರಾಜಕೀಯವಾಗಿ ತಮ್ಮನ್ನು ಮುಗಿಸಲು ಷಡ್ಯಂತ್ರ ನಡೆದಿದೆ ಎಂದಿರುವ ಬ್ರಿಜ್‌ಭೂಷಣ್‌ಸಿಂಗ್ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದು, ಎಲ್ಲದ್ದಕ್ಕೂ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡುತ್ತೇನೆ ಎಂದು ಹೇಳಿದರು.
ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರಾಗಿರುವ ಬ್ರಿಜ್‌ಭೂಷಣ್‌ಸಿಂಗ್ ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿಯ ಲೋಕಸಭಾ ಸದಸ್ಯರೂ ಆಗಿದ್ದಾರೆ.