
ಕಲಬುರಗಿ:ಆ.26:ಆಳಂದ ಪಟ್ಟಣದ ವಾರ್ಡವೊಂದರಲ್ಲಿ ಗುರುವಾರ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಬಲಾತ್ಕಾರಕ್ಕೆ ಯತ್ನಿಸಿದ ಘಟನೆ ಅಮಾನವೀಯವಾದುದ್ದು ಕೂಡಲೇ ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ತಾಲೂಕಿನಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ನಿರಂತರ ವರದಿಯಾಗುತ್ತಲೇ ಇವೆ ಆದರೆ ಕಠಿಣ ಕ್ರಮಗಳು ಜರುಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಕ್ರಮಕೈಗೊಳ್ಳಬೇಕು. ಸಮಾಜದಲ್ಲಿ ಇಂತಹ ಕೃತ್ಯಗಳು ಪದೇ ಪದೇ ನಡೆಯುತ್ತಿವೆ ಇದು ಸಮಾಜಕ್ಕೆ ಅತ್ಯಂತ ಮಾರಕವಾಗಿದ್ದು ಇದರಿಂದ ಪಾಲಕರು ತಮ್ಮ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ, ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ ಆದ್ದರಿಂದ ಶೀಘ್ರವಾಗಿ ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆಳಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಆಳಂದ ಪಟ್ಟಣದಲ್ಲಿ ನಡೆದ ಕುಕೃತ್ಯದ ಕುರಿತು ಈಗಾಗಲೇ ಫೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭದ್ರತೆ ಹೆಚ್ಚಿಸಬೇಕು ಜೊತೆಗೆ ವಾರ್ಡಗಳಲ್ಲಿ ಸಂಚರಿಸಿ ಮಹಿಳೆಯರಲ್ಲಿ, ಬಾಲಕಿಯರಲ್ಲಿ ಜಾಗೃತಿ ಮೂಡಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಯಿಸಿ ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ಪ್ರಕರಣದ ಅಪರಾಧಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು. ತಾಲೂಕಿನಲ್ಲಿ ನಡೆದ ಇಬ್ಬರ ಬಾಲಕಿಯರ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳು ಮಾಸುವ ಮುನ್ನವೇ ಈ ಪ್ರಕರಣ ನಡೆದಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ನಾಗರಿಕ ಸಮಾಜದ ಪ್ರಜ್ಞಾವಂತರೆಲ್ಲರೂ ಇಂತಹ ಘಟನೆಗಳನ್ನು ಖಂಡಿಸಬೇಕು ಅಲ್ಲದೇ ಪೊಲೀಸ್ ಅಧಿಕಾರಿಗಳು ಆರೋಪಿಯ ಮೇಲೆ ಕಠಿಣ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಾನೂನಿನ ರೀತ್ಯ ಉಗ್ರ ಶಿಕ್ಷಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.