ಲೈಂಗಿಕ ಅಲ್ಪಸಂಖ್ಯಾತರಿ ಸವಲತ್ತು ತಲುಪಿಸಲು ಪ್ರಯತ್ನ-ಮೌಲಾಲಿ

ರಾಯಚೂರು.ನ.5-ಆಪ್ತಮಿತ್ರ ಸಂಸ್ಥೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಮಧುಶ್ರೀ ಮತ್ತು ಮಂಜುಶ್ರೀಯವರ ಬಗ್ಗೆ ಸಂಸ್ಥೆ ತೀವ್ರ ಕಾಳಜಿ ವ್ಯಕ್ತಪಡಿಸುತ್ತದೆ. ಅವರು ಹೇಳಿರುವಂತೆ ಜಿಲ್ಲೆಯ ಲೈಂಗಿಕ ಅಲ್ಪಸಂಖ್ಯಾತರಿಗೆ ಮತ್ತು ಮಂಗಳಮುಖಿಯರಿಗೆ ತಲುಪಿಸಬೇಕಾದ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದೆಂದು ಆಪ್ತಮಿತ್ರ ಸಂಸ್ಥೆಯ ಅಧ್ಯಕ್ಷ ಮೌಲಾಲಿ ಹೇಳಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರು ಪ್ರತಿಯೊಂದು ವೃತ್ತಿಯಲ್ಲಿದ್ದಾರೆ. ಸಮಾಜಕ್ಕೆ ಹೆದರಿ ಲೈಂಗಿಕ ಅಲ್ಪಸಂಖ್ಯಾತರೆಂದು ಹೇಳಿಕೊಳ್ಳಲು ಇಷ್ಟವಿಲ್ಲದೇ ಮೌನವಾಗಿದ್ದಾರೆಂದು ತಿಳಿಸಿದರು.
ಜಿಲ್ಲೆಯ ಒಟ್ಟು 3ಸಾವಿರಕ್ಕೂ ಅಧಿಕ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಮಂಗಳಮುಖಿಯರಿದ್ದಾರೆ. ಮಂಗಳಮುಖಿಯವರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಪ್ರಕ್ರಿಯೆ ನಡೆದಿದ್ದು, ಪ್ರತಿವರ್ಷ 60-70 ವ್ಯಕ್ತಿಗಳು ಈ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಮಧುಶ್ರೀ ಮತ್ತು ಮಂಜುಶ್ರೀಯವರು ಫಲಾನುಭವಿಗಳಾಗಿದ್ದಾರೆಂದು ಹೇಳಿದರು.
ಆಪ್ತಮಿತ್ರ ಸಂಸ್ಥೆಯು ಇನ್ನುಮುಂದೆ ಎಲ್ಲರನ್ನೂ ಒಟ್ಟುಗೂಡಿಸಿ ಪ್ರತಿಯೊಬ್ಬರಿಗೂ ಸವಲತ್ತನ್ನು ತಲುಪಿಸುವ ಕಾರ್ಯ ಮಾಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಂದನಾ, ಅಂಜಲಿ, ತಿಮ್ಮಪ್ಪ ನಾಯಕ, ಜಂಬಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.