ಲೈಂಗಿಕ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ವಿತರಣೆ

ಬೀದರ:ಮೇ.30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿಯ ಚಿದ್ರಿ ರಸ್ತೆಯಲ್ಲಿ ಇರುವ ರಾಬಿಯಾ ಫಂಕ್ಷನ್ ಹಾಲ್‍ನಲ್ಲಿ 60 ಜನ ಲೈಂಗಿಕ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ಉಚಿತವಾಗಿ ವಿತರಿಸಲಾಯಿತು.

ಕೋವಿಡ್ ಸಂಕಟದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಅಸಹಾಯಕರಿಗೆ ನೆರವಿನ ಹಸ್ತ ಚಾಚಲು ಮುಂದೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಆಹಾರ ಕಿಟ್ ವಿತರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಡೀ ರಾಜ್ಯದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಶಾಹೀನ್ ಶಿಕ್ಷಣ ಸಂಸ್ಥೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸೋಂಕಿತರಿಗೆ ಉಚಿತ ಆಂಬುಲೆನ್ಸ್, ಊಟ, ವೈದ್ಯಕೀಯ ಸಲಹೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದರು.
ಜಿಲ್ಲೆಯಲ್ಲಿ ಯಾರೂ ಉಪವಾಸ ಮಲಗಬಾರದು ಎನ್ನುವುದು ಸಂಸ್ಥೆಯ ಉದ್ದೇಶ ಆಗಿದೆ. ಎಲ್ಲ ಸಂಘ- ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಿದರೆ ಇದು ಸಾಧ್ಯವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೂ, ಪ್ರತಿಯೊಬ್ಬರೂ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಸ್ವಯಂ ಪ್ರೇರಣೆಯಿಂದ ಕೋವಿಡ್ ಲಸಿಕೆ ಪಡೆಯಬೇಕು. ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಅಂಗವಿಕಲರಿಗೆ ಲಸಿಕಾ ಕೇಂದ್ರದವರೆಗೆ ಉಚಿತ ಬಸ್ ಸೌಕರ್ಯ ಒದಗಿಸಲು ಸಂಸ್ಥೆ ಸಿದ್ಧವಿದೆ ಎಂದರು.

ಬೀದರ್ ತಾಲ್ಲೂಕಿನಲ್ಲಿ 250 ಜನರಿಗೆ ಉಚಿತ ಆಹಾರಧಾನ್ಯ ಕಿಟ್ ವಿತರಿಸುತ್ತಿದ್ದು, ನಗರದಲ್ಲಿ 60 ಜನ ಲೈಂಗಿಕ ಅಲ್ಪಸಂಖ್ಯಾತರಿಗೆ ಅಕ್ಕಿ, ಗೋಧಿ ಹಿಟ್ಟು, ತೊಗರಿ ಬೇಳೆ, ಸಕ್ಕರೆ, ಉಪ್ಪು, ಮೆಣಸಿನ ಪುಡಿ, ಎಣ್ಣೆ, ಬಟ್ಟೆ ಹಾಗೂ ಸ್ನಾನದ ಸಾಬೂನು ಒಳಗೊಂಡ ಕಿಟ್ ವಿತರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮರಾಬ್ಬಾ ತಿಳಿಸಿದರು.

ಲಾಕ್‍ಡೌನ್ ಪ್ರಯುಕ್ತ ಯೋಜನೆಯು ಕೊರೊನಾ ಸೋಂಕು ಹಾಗೂ ಲಸಿಕೆ ಕುರಿತು ಸಹ ಜಾಗೃತಿ ಮೂಡಿಸುತ್ತಿದೆ ಎಂದರು.

ತಹಶೀಲ್ದಾರ್ ಗಂಗಾದೇವಿ ಅವರು ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೀದರ್ ತಾಲ್ಲೂಕು ಯೋಜನಾಧಿಕಾರಿ ರಮೇಶ, ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪುನೀತ್ ಸಾಳೆ, ಖಜಾಂಚಿ ವೀರೇಶ, ಲಕ್ಷ್ಮಿ ಬಾವುಗೆ, ಶಾರದಾ, ಈಶ್ವರ ಮಲ್ಕಾಪುರ ಇದ್ದರು.