
ನವದೆಹಲಿ, ಮೇ.೧೭- ಭಾರತೀಯ ವಾಯುಪಡೆಗೆ ಸೇರಿದ ಸಿ-೧೭ ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವ ಹಿನ್ನೆಲೆ ಕೇಂದ್ರಾಡಳಿತ ಪ್ರದೇಶ ಲಡಾಕ್ ರಾಜಧಾನಿ ಲೇಹ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಹಾರಾಟ ಇಂದು ರದ್ದುಪಡಿಸಲಾಗಿದೆ.
ತಾಂತ್ರಿಕ ಕಾರಣದಿಂದ ಭಾರತೀಯ ವಾಯುಪಡೆಗೆ ಸೇರಿದ ಸಾರಿಗೆ ವಿಮಾನ ಸಿ-೧೭ ಗ್ಲೋಬ್‌ಮಾಸ್ಟರ್ ಹಾರಾಟ ನಡೆಸಲು ಸಾಧ್ಯವಾಗದೆ ರನ್ ವೇ ಯಲ್ಲೇ ನಿಂತ ಪರಿಣಾಮ ಇತರೆ ವಿಮಾನಗಳ ಹಾರಾಟಕ್ಕೆ ಅಡ್ಡಿಯುಂಟಾಗಿದೆ.
ಸಿ -೧೭ ಗ್ಲೋಬ್ ಮಾಸ್ಟರ್ ಸೇವೆಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದು, ಕುಶೋಕ್ ಬಕುಲಾ ರಿಂಪೊಚಿ ವಿಮಾನ ನಿಲ್ದಾಣದಲ್ಲಿ ನಿರ್ಬಂಧಿತ ರನ್ ವೇ ಹಗಲಿನಲ್ಲಿ ಯಾವುದೇ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ತಡೆದಿರುವುದೆ ವಿಮಾನ ರದ್ದತಿಗೆ ಕಾರಣವಾಗಿದೆ.
ಈ ಸಮಸ್ಯೆಯನ್ನ ಪರಿಹರಿಸುವ ಪ್ರಕ್ರಿಯೆಯಲ್ಲಿದ್ದು, ಮರುದಿನ ಬೆಳಿಗ್ಗೆ ವೇಳೆಗೆ ರನ್ವೇ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.