
ಅಸ್ಸಾಂ, ಮೇ.೧೭-‘ಲೇಡಿ ಸಿಂಗಂ’ ಅಥವಾ ‘ದಬಾಂಗ್ ಕಾಪ್’ ಎಂದು ಕರೆಸಿಕೊಂಡಿದ್ದ ಅಸ್ಸಾಂ ಪೊಲೀಸ್ ಇಲಾಖೆಯ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಜುನ್ಮೋನಿ ರಭಾ(೩೦) ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಾಳಿಬೋರ್ ಉಪವಿಭಾಗದ ಸರ್‌ಭುಗಿಯಾ ಎಂಬ ಗ್ರಾಮದಲ್ಲಿ ಜುನ್ಮೋನಿ ಪ್ರಯಾಣಿ ಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಅಪಘಾತ ನಡೆದಾಗ ಏಕಾಂಗಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಹಾಗೂ ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಜುನ್ಮೋನಿ, ಇಲಾಖೆ ಅಥವಾ ತಮ್ಮ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೇ ಖಾಸಗಿ ಕಾರಿನಲ್ಲಿ ಉತ್ತರ ಅಸ್ಸಾಂಗೆ ಹೋಗುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಮೊರಿಕೊಲಾಂಗ್ ಹೊರಠಾಣೆಯ ಹೊಣೆ ಹೊಂದಿದ್ದ ರಭಾ, ಹಣಕಾಸು ಅವ್ಯವಹಾರಗಳಲ್ಲಿ ಶಾಮೀಲಾಗಿದ್ದವರಿಗೆ ಹಾಗೂ ಇತರ ಅಪರಾಧಿಗಳಿಗೆ ಸಿಂಹಸ್ವಪ್ನ ಎನಿಸಿದ್ದರು.
ಕಳೆದ ಜೂನ್‌ನಲ್ಲಿ ಲಂಚ ಆರೋಪದಿಂದ ಇವರನ್ನು ಬಂಧಿಸಿ, ಸೇವೆಯಿಂದ ಅಮಾನತು ಮಾಡಲಾಗಿತ್ತು. ಅಮಾನತು ರದ್ದಾದ ಬಳಿಕ ಅವರು ಮತ್ತೆ ಸೇವೆಗೆ ಸೇರಿದ್ದರು. ೨೦೨೨ರ ಜನವರಿಯಲ್ಲಿ ಬಿಜೆಪಿ ಶಾಸಕ ಅಮಿಯ ಕುಮಾರ್ ಭುಯಾನ್ ಜತೆಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದ ಸಂದರ್ಭದಲ್ಲಿ ಮತ್ತೆ ವಿವಾದದಲ್ಲಿ ಸಿಲುಕಿದ್ದರು.
ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಂಟೈನರ್ ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು. ನಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಡೋಲಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಇನ್ಸ್ ಪೆಕ್ಟರ್ ಅವರ ಕುಟುಂಬ ನಿಗೂಢ ಸಾವು ಎಂದು ಅನುಮಾನ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ.