ಲೇಖಕ ಡಾ.ಚಂದ್ರಶೇಖರ್‌ಗೆ ನುಡಿನಮನ

ದೇವದುರ್ಗ,ಜ.೧೧- ನಾಡಿನ ಹೆಸರಾಂತ ಸಂಶೋಧಕ ಲೇಖಕರು ಹಾಗೂ ಇತಿಹಾಸ ತಜ್ಞ ಡಾ.ಎಚ್.ಚಂದ್ರಶೇಖರ್ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ಕಸಾಪ ಹಾಗೂ ಸಾರ್ವಜನಿಕ ಗ್ರಂಥಾಲಯ ಶಾಖೆಯಿಂದ ನುಡಿ ನಮನ ಹಾಗೂ ಶ್ರದ್ಧಾಂಜಲಿ ಸಭೆ ಮಂಗಳವಾರ ಜರುಗಿತು.
ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ಡಾ.ಎಚ್.ಚಂದ್ರಶೇಖರ್ ನಾಡಿನ ಹಿರಿಯ ಸಾಹಿತಿ, ವಿಚಾರವಾದಿ ಹಾಗೂ ಇತಿಹಾಸ ಸಂಶೋಧಕರಾಗಿ ಲೇಖನ, ಗ್ರಂಥಗಳನ್ನು ಬರೆದಿದ್ದಾರೆ. ಸುಪ್ರಸಿದ್ಧ ಭೂ ವಿಜ್ಞಾನಿಗಳು ಅಲ್ಲದೆ ಪರಿಸರ ಪ್ರೇಮಿ ಆಗಿ ಪ್ರಖ್ಯಾತ ಛಾಯಾಚಿತ್ರಗ್ರಾಹಕರಾಗಿ ವಚನ ಸಾಹಿತ್ಯಕ್ಕೆ ಅನೇಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ.
ಅಲ್ಲದೆ ದೇವದುರ್ಗದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಾದ ಸಿರಿ ದುರ್ಗದ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಶ ವಿದೇಶಗಳಲ್ಲಿ ಗೋಷ್ಠಿಗಳಲ್ಲಿ ಪಾಲ್ಗೊಂಡು ತಮ್ಮ ಪ್ರಬಂಧವನ್ನು ಮಂಡಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ನಮ್ಮ ಊಟಿ ಮತ್ತು ಹೊನ್ನಕುಣಿಯಲ್ಲಿ ಬಂಗಾರದ ನಿಕ್ಷೇಪವಿದೆ ಎಂದು ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇಂಥ ಮಹಾನ್ ಚೇತನ ನಮ್ಮನ್ನು ಅಗಲಿದ್ದು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ವಕೀಲ ಪ್ರಕಾಶ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿದರು. ವರದಿಗಾರ ಬಸವನಗೌಡ ದೇಸಾಯಿ, ನರಸಿಂಗರಾವ್ ಸರ್ಕಿಲ್, ಬಸವರಾಜ್ ಬ್ಯಾಗವಟ್, ಶರಣಗೌಡ ಕೊಪ್ಪರ, ಮೈನುದ್ದೀನ್ ಕಾಟಮಳ್ಳಿ, ಅಲಿಬಾಬ ಪಟೇಲ್, ಮರಿಯಪ್ಪ ರಾಯಚೂರಕರ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಇತರರಿದ್ದಾರೆ.