ಲೇಖಕರ ಪುಸ್ತಕ ಖರೀದಿಸುವ ಯೋಜನೆ ಮತ್ತೆ ಮುಂದುವರೆಸಲು ಆಗ್ರಹಿಸಿ ಮನವಿ

ಕಲಬುರಗಿ:ಮಾ.06:ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಒಳಪಡುವ ಏಳು ಜಿಲ್ಲೆಯ ಲೇಖಕರ ಹಾಗೂ ಬರಹಗಾರರಿಂದ ರಚಿಸಲ್ಪಟ್ಟ ಪುಸ್ತಕಗಳನ್ನು ಮಂಡಳಿ ವತಿಯಿಂದ ನೇರವಾಗಿ ಖರೀದಿಸುವ ಯೋಜನೆಯನ್ನು ಯಥಾವತ್ತಾಗಿ ಮುಂದುವರೆಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಆಗ್ರಹಿಸುತ್ತದೆ. ಈ ಭಾಗದ ಲೇಖಕರಿಗೆ ಶೈಕ್ಷಣಿಕವಾಗಿ ಮತ್ತು ಸಾಹಿತ್ಯಕವಾಗಿ ಪ್ರೋತ್ಸಾಹ ನೀಡುವ ಸದುದ್ದೇಶದಿಂದಾಗಿ ಪುಸ್ತಕ ಖರೀದಿಸುವ ಯೋಜನೆಯನ್ನು ಮಂಡಳಿಯು ಬಹು ದಿನಗಳ ಹಿಂದೆಯೇ ಜಾರಿಗೆ ತರಲಾಗಿತ್ತು. ಆದರೆ ಹಣಕಾಸಿನ ಕೊರತೆಯ ಕಾರಣದಿಂದಾಗಿ ಯೋಜನೆ ಸ್ಥಗಿತಗೊಳಿಸಿರುವುದು ಕಲ್ಯಾಣ ಕರ್ನಾಟಕದ ಬರಹಗಾರರ ವಿರೋಧಿ ನೀತಿಯನ್ನು ಅಧ್ಯಾಪಕರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಈ ಹಿಂದೆ ಜಾರಿಯಲ್ಲಿದ್ದ ಮತ್ತು ಲೇಖಕರಿಂದ ನೇರವಾಗಿ ಪುಸ್ತಕಗಳನ್ನು ಖರೀದಿಸುವ ಯೋಜನೆಯಿಂದಾಗಿ ಹಲವು ಲೇಖಕರಿಗೆ ಆರ್ಥಿಕವಾಗಿ ಅನುಕೂಲವಾಗಿತ್ತು. ಹಾಗಾಗಿ ಸ್ಥಗಿತಗೊಂಡಿರುವ ಪುಸ್ತಕ ಖರೀದಿಸುವ ಯೋಜನೆಯನ್ನು ಮತ್ತೆ ಮುಂದುವರೆಸಬೇಕೆಂದು ಸಂಘವು ಒತ್ತಾಯಿಸುತ್ತದೆ. ಆ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಜನರ ಓದುವ ಹವ್ಯಾಸವನ್ನು ಮತ್ತು ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆಯಾಗಿತ್ತು.
ಈ ಯೋಜನೆಯಿಂದಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕøತಿಕ ಹಾಗೂ ಪರಂಪರೆ ಕುರಿತು ಹಲವು ಲೇಖಕರು ವಿದ್ವತ್ಪೂರ್ಣವಾದ ಕೃತಿಗಳನ್ನು ರಚಿಸಿದ್ದಾರೆ.ಇದರಿಂದಾಗಿ ಕಲ್ಯಾಣ ಕರ್ನಾಟಕದ ಜನತೆಗೆ ಪ್ರಾದೇಶಿಕ ಅಸಮತೋಲನದ ವಿವಿಧ ಆಯಾಮಗಳನ್ನು ಅರಿತುಕೊಳ್ಳಲು ಸಾಧ್ಯವಾಗಿತ್ತು. ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶವು ಶೈಕ್ಷಣಿಕ ಹಿಂದುಳಿಕೆಯನ್ನು ನಿರ್ಮೂಲನೆ ಮಾಡಲು ಸರಕಾರವು ಈಗಾಗಲೇ ಸಂವಿಧಾನದ 371(ಜೆ) ಅನುಚ್ಛೇದವನ್ನು ಅನುಷ್ಠಾನಗೊಳಿಸಲಾಗಿದೆ.ಆದರೆ 371(ಜೆ) ಕಾಯ್ದೆಯ ಆಶಯಗಳ ವಿರುದ್ಧವಾಗಿ ಪ್ರದೇಶಾಭಿವೃದ್ಧಿ ಮಂಡಳಿ ತೀರ್ಮಾನ ತೆಗೆದುಕೊಂಡಿರುವುದು ನ್ಯಾಯಸಮ್ಮತವಾದ ಕ್ರಮವಾಗಿರುವುದಿಲ್ಲ. ಈ ಪುಸ್ತಕ ಖರೀದಿಸುವ ಯೋಜನೆಯಿಂದಾಗಿ ಹಲವು ಲೇಖಕರಿಗೂ ಹಾಗೂ ಓದಗರಿಗೂ ಶೈಕ್ಷಣಿಕವಾಗಿ ಹೆಚ್ಚು ಉಪಯುಕ್ತವಾಗಿತ್ತು. ಆದರೆ ಏಕಾಏಕಿಯವಾಗಿ ಪುಸ್ತಕ ಖರೀದಿಸುವ ಯೋಜನೆ ಸ್ಥಗಿತಗೊಳಿಸಿರುವುದು ಪ್ರಾದೇಶಿಕ ಸಮತೋಲನ ತತ್ವಕ್ಕೆ ವಿರುದ್ಧವಾದ ಕ್ರಮವಾಗಿದೆ. ಅಭಿವೃದ್ಧಿ ಎಂದರೆ ಕೇವಲ ಕಟ್ಟಡ-ಕಾಮಗಾರಿಗಳ ನಿರ್ಮಾಣ ಮಾತ್ರವಲ್ಲ. ಬದಲಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಜೊತೆಗೆ ಜನರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದೇ ಆಗಿದೆ ಎಂಬುದನ್ನು ಅಧಿಕಾರಸ್ಥರು ಅರ್ಥಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಹಣಕಾಸಿನ ಕೊರತೆಯ ಕಾರಣದಿಂದಾಗಿ ಸ್ಥಗಿತಗೊಂಡಿರುವ ಪುಸ್ತಕ ಖರೀದಿಸುವ ಯೋಜನೆಯನ್ನು ಮತ್ತೆ ಮಂಡಳಿ ವತಿಯಿಂದ ಮುಂದುವರೆಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಈ ಮೂಲಕ ಮಂಡಳಿಯ ಮಾನ್ಯ ಕಾರ್ಯದರ್ಶಿಗಳಲ್ಲಿ ಮನವಿ ಮಾಡುತ್ತದೆ. ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ ಅವರ ನೇತೃತ್ವದಲ್ಲಿ ನಿಯೋಗದ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾನ್ಯ ಕಾರ್ಯದರ್ಶಿಗಳಾದ ಶ್ರೀ ಅನಿರುದ್ಧ ಶ್ರಾವಣ.ಪಿ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳಾದ ಡಾ.ಶ್ರೀಮಂತ ಹೋಳಕರ,ಡಾ.ಶಿವಾನಂದ ಲೇಂಗಟಿ,ಡಾ.ಶರಣಪ್ಪ ಗುಂಡಗುರ್ತಿ ,ಡಾ.ಎನ್.ಎಚ್. ಕುದರಿಹಾಳ ಇತರರು ಇದ್ದರು.