ಲೆಕ್ಕ ಸ್ಥಾಯಿ ಸಮಿತಿ ಸಭೆಗೆ ಗೈರಾದ ಅಧಿಕಾರಿ/ಸಿಬ್ಬಂದಿಗೆ ನೋಟಿಸ್ ನೀಡುವಂತೆ ಮೇಯರ್ ಆದೇಶ

ಕಲಬುರಗಿ:ಸೆ.12: ನಗರದ ಪಾಲಿಕೆಯ ಕೇಂದ್ರ ಕಛೇರಿಯ ಸಭಾಭವನದಲ್ಲಿ ಲೆಕ್ಕಸ್ಥಾಯಿ ಸಮಿತಿ ಅಧ್ಯಕ್ಷ ಸಾಜಿದ ಕಲ್ಯಾಣಿ ಅವರ ಅಧ್ಯಕ್ಷತೆಯಲ್ಲಿ ಸಭೆಯು ಜರುಗಿದ್ದು, ಸದರಿ ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರು, ಪೂಜ್ಯ ಮಹಾಪೌರರು, ಉಪ ಮಹಾಪೌರರು ಹಾಗೂ ಲೆಕ್ಕ ಸ್ಥಾಯಿ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
ಸದರಿ ಸಭೆಗೆ ಸುಮಾರು 10 ದಿನಗಳ ಹಿಂದೆ ಪಾಲಿಕೆಯ ಸಭಾಶಾಖೆಯಿಂದ ಸಂಬಂಧಪಟ್ಟ ಶಾಖೆಗಳಿಗೆ ಸಭಾ ಕಾರ್ಯಸೂಚಿಯನ್ನು ನೀಡಿ, ವಿಷಯಕ್ಕೆ ಸಂಬಂಧಪಟ್ಟಂತೆ ಪೂರಕ ಟಿಪ್ಪಣಿಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು.

ಆದರೆ ಸಂಬಂಧಪಟ್ಟ ಶಾಖೆಗಳಿಂದ ಮುಂಚಿತವಾಗಿ ಸ್ಥಾಯಿ ಸಮಿತಿಯ ಯಾವ ಸದಸ್ಯರಿಗೂ ಟಿಪ್ಪಣಿ ನೀಡಿರುವುದಿಲ್ಲ ಮತ್ತು ಸಂಬಂಧಪಟ್ಟ ಕೆಲವು ಶಾಖೆಯ ಅಧಿಕಾರಿಗಳು ಸದರಿ ಸಭೆಗೆ ಗೈರು ಹಾಜರಿದ್ದರು. ಈ ವಿಷಯವಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷರು, ಪೂಜ್ಯ ಮಹಾಪೌರರು, ಉಪ ಮಹಾಪೌರರು ಹಾಗೂ ಲೆಕ್ಕ ಸ್ಥಾಯಿ ಸಮಿತಿಯ ಸರ್ವ ಸದಸ್ಯರು ಅಸಮಧಾನ ವ್ಯಕ್ತಪಡಿಸುತ್ತಾ ಸಭೆಯನ್ನು ಅನಿರ್ದಿಷ್ಟವಧಿಗಾಗಿ ಮುಂದೂಡಲಾಯಿತು. ಸುಮಾರು 20 ವರ್ಷವಾದರೂ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸುಧಾರಿಸುವುದಿಲ್ಲವೇಂದು ಪೂಜ್ಯ ಮಹಾಪೌರರು ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಗೈರು ಹಾಜರಾದ ಅಧಿಕಾರಿ/ಸಿಬ್ಬಂದಿ ರವರಿಗೆ ನೋಟಿಸ್ ನೀಡುವಂತೆ ಆದೇಶಿಸಿದರು.