ಲೆಕ್ಕಿಸದ ಕೊರೊನಾ ಮಾರ್ಗಸೂಚಿ – ಭರ್ಜರಿ ಊಟ

ಮಕರ ಸಂಕ್ರಾಂತಿ ಕೃಷ್ಣಾ – ತುಂಗಭದ್ರಾ ಪುಣ್ಯ ಸ್ನಾನ
ರಾಯಚೂರು.ಜ.೧೪- ಮಕರ ಸಂಕ್ರಾಂತಿ ಅಂಗವಾಗಿ ಇಂದು ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಪುಣ್ಯ ಸ್ನಾನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಸಂಕ್ರಾಂತಿ ಸಂದರ್ಭದಲ್ಲಿ ನದಿ ಸ್ನಾನ ಮಾಡುವ ಪರಂಪರೆ ಹಿನ್ನೆಲೆಯಲ್ಲಿ ಇಂದು ಭಾರೀ ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನದಿ ಸ್ನಾನಕ್ಕೆ ಜನ ಆಗಮಿಸಿದ್ದರು. ಅಲ್ಲಿಯ ಅಕ್ಕಪಕ್ಕದಲ್ಲಿರುವ ದೇವಸ್ಥಾನಗಳಲ್ಲಿ ದರ್ಶನ ಪಡೆದು, ಸಂಕ್ರಾಂತಿಯನ್ನು ಪಿಕ್ನಿಕ್ ರೀತಿಯಲ್ಲಿ ಆಚರಿಸಿದರು. ಸಂಕ್ರಾಂತಿ ವಿಶೇಷ ಊಟಗಳಲ್ಲಿ ಸಜ್ಜೆ ರೊಟ್ಟಿ, ಎಣ್ಣೆ ಬರ್ತಾ, ಶೇಂಗಾ ಹೊಳಿಗಿ ಸೇರಿದಂತೆ ಇನ್ನಿತರ ವಿವಿಧ ಬಗೆ ಬಗೆಯ ಅಡುಗೆಗಳನ್ನು ತಯಾರಿಸಿಕೊಂಡು ಸಹ ಕುಟುಂಬ ಪರಿವಾರದೊಂದಿಗೆ ನದಿ ಪಾತ್ರಕ್ಕೆ ತೆರಳಿ, ಇಂದು ಸಂಕ್ರಾಂತಿಯ ಸಂಭ್ರಮ ಆಚರಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಸೂಚನೆ ನೀಡಿದ್ದರೂ, ಅನೇಕ ಕಡೆ ಯಾವುದೇ ಮಾರ್ಗಸೂಚಿ ಮರೆಯಾಗಿತ್ತು. ಅನೇಕ ಕಡೆ ಜನ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಮಂತ್ರಾಲಯ ತುಂಗಭದ್ರಾ ನದಿಯಲ್ಲಿ ಇಂದು ಭಾರೀ ಸಂಖ್ಯೆಯಲ್ಲಿ ಜನ ಕಂಡು ಬಂದಿತು. ನದಿಯಲ್ಲಿ ನೀರಿನ ಪ್ರಯಾಣ ಸಾಮಾನ್ಯಕ್ಕಿಂತ ಕಡಿಮೆ ಇರುವುದರಿಂದ ಜನರು ನದಿಯ ಒಳ ಭಾಗಕ್ಕೆ ತೆರಳಿ, ಪವಿತ್ರ ಸ್ನಾನ ನಿರ್ವಹಿಸಿದರು. ಕೆಲವೆಡೆ ಪೊಲೀಸರ ವ್ಯವಸ್ಥೆ ಇದ್ದರೇ, ಇನ್ನೂ ಬಹುತೇಕ ಕಡೆ ಯಾವುದೇ ಭದ್ರತೆ ಇರಲಿಲ್ಲ.
ಸಂಕ್ರಾಂತಿ ಅಂಗವಾಗಿ ಇಂದು ಅನೇಕರ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿತ್ತರಿಸಿಕೊಂಡು ಹಬ್ಬದ ಕಳೆ ಹೆಚ್ಚುವಂತೆ ಮಾಡಿತ್ತು. ಒಟ್ಟಾರೆಯಾಗಿ ಕೊರೊನಾ ಮಹಾಮಾರಿ ಮಧ್ಯೆ ಮೂರನೇ ಸಂಕ್ರಾಂತಿ ಜನ ಆಚರಿಸಿದರು. ಯಾದಗಿರಿ ಜಿಲ್ಲೆಯ ಮೈಲಾಪೂರು ಜಾತ್ರೆ ಸೇರಿದಂತೆ ಅನೇಕ ಜಾತ್ರೆಗಳನ್ನು ರದ್ದು ಪಡಿಸಲಾಗಿದೆ.