ಲೂಯಿಸ್ ಕಂಪನಿಯ ನಕಲಿ ಬ್ಯಾಗ್‌ಗಳ ವಶ

ಬೆಂಗಳೂರು,ಸೆ.೯- ಸ್ಕೈ ಬ್ಯಾಗ್, ಲೂಯಿಸ್ ಕಂಪನಿಯ ನಕಲಿ ಬ್ಯಾಗ್ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ೫ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ೮ ಲಕ್ಷ ಮೌಲ್ಯದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಟಿ ಮಾರುಕಟ್ಟೆಯ ಭವಾನಿ ಬ್ಯಾಗ್ಸ್, ನಂದಿ ಬೆಲ್ಟ್, ಎಂಪಿ ಎಂಟರ್ ಪ್ರೈಸಸ್, ಪ್ರವೀಣ್ ನಾವೆಲ್ಟೀಸ್ ಹಾಗೂ ಉಪ್ಪಾರಪೇಟೆಯ ಅಕ್ಷಯ್ ಬ್ಯಾಗ್ಸ್ ಅಂಗಡಿಗಳ ಮೇಲೆ ದಾಳಿ ನಡೆಸಿ ನಕಲಿ ಉತ್ಪನ್ನಗಳನ್ನು ಪತ್ತೆ ಮಾಡಲಾಗಿದೆ. ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟಕ್ಕೆ ಇಟ್ಟುಕೊಂಡ ಸ್ಕೈ ಬ್ಯಾಗ್‌ನ ೭೧೪ ನಕಲಿ ಬ್ಯಾಗ್‌ಗಳು, ಲೂಯಿಸ್ ಕಂಪನಿಯ ೧೩೧ ಬ್ಯಾಗ್‌ಗಳನ್ನು ವಶಪಡಿಸಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತ ತಿಳಿಸಿದರು.
ಸಿಟಿ ಮಾರುಕಟ್ಟೆಯಲ್ಲಿ ೪ ಹಾಗೂ ಉಪ್ಪಾರಪೇಟೆಯಲ್ಲಿ ೧ ಪ್ರಕರಣ ದಾಖಲಿಸಿ ಅಂಗಡಿ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.