
ವಾಷಿಂಗ್ಟನ್, ಎ.೪- ೫೦ ವರ್ಷಗಳ ಸುದೀರ್ಘ ಅವಧಿಯ ಬಳಿಕ ಇದೀಗ ಅಮೆರಿಕಾದ ನಾಸಾ ಲೂನಾರ್ (ಚಂದ್ರ) ಮಿಷನ್‌ಗೆ ಯೋಜನೆ ಹಾಕಿಕೊಂಡಿದ್ದು, ತಯಾರಿ ಭರದಿಂದ ಸಾಗುತ್ತಿದೆ. ಅಲ್ಲದೆ ಚಂದ್ರನ ಕಡೆಗೆ ಪ್ರಯಾಣ ಬೆಳೆಸಲಿರುವ ನಾಲ್ವರ ಗಗನಯಾತ್ರಿಗಳ ಹೆಸರನ್ನು ಕೂಡ ಇದೀಗ ಜಗತ್ತಿನ ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಬಹಿರಂಗಪಡಿಸಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಂದ್ರನ ಬಳಿ ನಾಸಾ ಮಹಿಳೆಯನ್ನು ಕಳುಹಿಸಲಿದ್ದು, ನಾಲ್ವರ ತಂಡದಲ್ಲಿ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಕೂಡ ಸೇರಿದ್ದಾರೆ.
ಕ್ರಿಸ್ಟಿನಾ ಕೋಚ್ ಅವರು ಚಂದ್ರನ ಬಳಿ ತೆರಳಲಿರುವ ಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದರೆ ವಿಕ್ಟರ್ ಗ್ಲೋವರ್ ಈ ಸಾಧನೆಗೈಯ್ಯಲಿರುವ ಮೊತ್ತ ಮೊದಲ ಕಪ್ಪುವರ್ಣೀಯ ಗಗನಯಾತ್ರಿಯಾಗಲಿದ್ದಾರೆ. ಉಳಿದಂತೆ ನಾಲ್ವರ ತಂಡದಲ್ಲಿ ರೀಡ್ ವೈಸ್ಮನ್ ಮತ್ತು ಜೆರೆಮಿ ಹ್ಯಾನ್ಸೆನ್ ಎಂಬ ಗಗನಯಾತ್ರಿಗಳು ಕೂಡ ಸೇರಿದ್ದಾರೆ. ನಾಲ್ವರು ಗಗನಯಾತ್ರಿಗಳ ಪೈಕಿ ಮೂವರು ಅಮೆರಿಕಾ ಮೂಲದವರಾದರೆ ಓರ್ವ ವ್ಯಕ್ತಿ ಕೆನಡಾದವರಾಗಿದ್ದಾರೆ. ಈ ನಾಲ್ವರು ಗಗನಯಾತ್ರಿಗಳಿಗೆ ಕಠಿಣ ತರಬೇತಿ ನೀಡುವ ಕಾರ್ಯವನ್ನು ಸದ್ಯದಲ್ಲೇ ಆರಂಭಿಸಲಾಗುತ್ತಿದ್ದು, ಇಲ್ಲಿ ಚಂದ್ರನ ವಾತಾವರಣಕ್ಕೆ ಒಗ್ಗಿಕೊಳ್ಳುವ ರೀತಿಯಲ್ಲಿ ಹಲವು ವಿಧದ ಆಯಾಮಗಳಲ್ಲಿ ಪಡೆದುಕೊಳ್ಳಲಿದ್ದಾರೆ. ಇನ್ನು ಈ ಗಗನಯಾತ್ರಿಗಳು ಚಂದ್ರನ ಅಂಗಣಕ್ಕೆ ಇಳಿಯುವುದಿಲ್ಲ. ಬದಲಾಗಿ ಈ ಮಿಷನ್ ಮುಂದಿನ ಪೀಳಿಗೆಗೆ ಚಂದ್ರನ ಅಂಗಣಕ್ಕೆ ಕಾಲಿಡುವ ಕಾರ್ಯಕ್ಕೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ. ಇನ್ನು ಗಗನಾತ್ರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೂಡ ನಾಸಾ ಹಲವು ವೈವಿಧ್ಯಗಳನ್ನು ಪ್ರದರ್ಶಿಸಿದೆ. ಕಪ್ಪು ವರ್ಣೀಯ ವ್ಯಕ್ತಿ ಹಾಗೂ ಮಹಿಳೆಯನ್ನು ತಂಡದಲ್ಲಿ ನೇಮಿಸುವ ಮೂಲಕ ಬದಲಾವಣೆಗೆ ಒತ್ತು ನೀಡಿದೆ. ಯಾಕೆಂದರೆ ನಾಸಾದ ಈ ಹಿಂದಿನ ಎಲ್ಲಾ ಯೋಜನೆಗಳನ್ನು ಬಿಳಿ ಬಣ್ಣದ ಪುರುಷರೇ ನಡೆಸಿದ್ದರು. ಆದರೆ ಸದ್ಯದ ನಾಲ್ವರ ತಂಡದಲ್ಲಿ ವೈವಿದ್ಯಗಳಿಗೆ ಅವಕಾಶ ನೀಡಲಾಗಿದೆ.
ಗಗನಯಾತ್ರಿಗಳ ಕಿರುಪರಿಚಯ
ರೀಡ್ ವೈಸ್‌ಮನ್ (೪೭): ರೀಡ್ ಅವರು ನಾಸಾದ ಗಗನಯಾತ್ರಿ ಕಚೇರಿಯ ಮುಖ್ಯಸ್ಥರಾಗಿ ಕೆಲ ಕಾಲ ಸೇವೆ ಸಲ್ಲಿಸಿದ್ದು, ಅಲ್ಲದೆ ಅಮೆರಿಕಾ ನೌಕಾದಳದ ಫೈಟರ್ ಕೂಡ ಆಗಿದ್ದರು. ೨೦೧೫ರಲ್ಲಿ ರೀಡ್ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು.
ವಿಕ್ಟರ್ ಗ್ಲೋವರ್ (೪೬): ಅಮೆರಿಕಾ ನೌಕಾದಳದ ಪರೀಕ್ಷಾ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದ ಗ್ಲೋವರ್, ೨೦೧೩ ರಲ್ಲಿ ನಾಸಾಗೆ ಸೇರಿದರು. ೨೦೨೦ ರಲ್ಲಿ ತಮ್ಮ ಮೊದಲ ಬಾಹ್ಯಾಕಾಶ ಯಾನ ಮಾಡಿದ್ದರು. ಗ್ಲೋವರ್ ಆರು ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡ ಮೊದಲ ಆಫ್ರಿಕನ್ ಅಮೆರಿಕನ್ ಆಗಿದ್ದಾರೆ.
ಕ್ರಿಸ್ಟಿನಾ ಕೋಚ್ (೪೪): ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ಕೋಚ್ ಅವರು ೩೨೮ ದಿನಗಳ ಕಾಲ ಮಹಿಳೆಯೊಬ್ಬರು ಬಾಹ್ಯಾಕಾಶದಲ್ಲಿ ಸುದೀರ್ಘ ನಿರಂತರ ಸಮಯವನ್ನು ಹೊಂದಿರುವ ದಾಖಲೆ ಹೊಂದಿದ್ದಾರೆ. ನಾಸಾ ಗಗನಯಾತ್ರಿ ಜೆಸ್ಸಿಕಾ ಮೀರ್ ಜೊತೆ ಕೋಚ್ ಅವರು ೨೦೧೯ರ ಅಕ್ಟೋಬರ್‌ನಲ್ಲಿ ಮೊದಲ ಸಂಪೂರ್ಣ ಮಹಿಳಾ ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿ, ಎಲ್ಲರ ಗಮನ ಸೆಳೆದಿದ್ದರು.
ಜೆರೆಮಿ ಹ್ಯಾನ್ಸೆನ್ (೪೭): ಕೆನಡಾದ ಏರ್‌ಫೋರ್ಸ್‌ನಲ್ಲಿ ಫೈಟರ್ ಆಗಿ ಕಾರ್ಯ ಆರಂಭಿಸಿದ್ದ ಜೆರೆಮಿ ಬಳಿಕ ಕೆನಡಾದ ಬಾಹ್ಯಾಕಾಶ ಸಂಸ್ಥೆಗೆ ಸೇರಿದರು. ಜೆರೆಮಿ ಅವರ ಪಾಲಿಗೆ ಇದು ಚೊಚ್ಚಲ ಬಾಹ್ಯಾಕಾಶ ಯಾತ್ರೆಯಾಗಲಿದೆ.