ಲೀಲಾವತಿ ಅವರ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ

ಬೆಂಗಳೂರು, ಡಿ.8- ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಲೀಲಾವತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ ಎಂದಿದ್ದಾರೆ.

ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಪರೂಪದ ಕಲಾವಿದೆ:

“ಕನ್ನಡ ಚಿತ್ರರಂಗ ಕಂಡ ಮೇರು ನಟಿಯರಲ್ಲಿ ಲೀಲಾವತಿ ಅವರೂ ಒಬ್ಬರು. ಅವರೊಬ್ಬ ಕಲಾತಪಸ್ವಿ. ತಮ್ಮ ಮನೋಜ್ಞ ಅಭಿನಯದಿಂದ “ಅಮ್ಮ” ಎಂದೇ ಖ್ಯಾತಿ ಪಡೆದಿದ್ದರು.ಕಪ್ಪು ಬಿಳುಪು ಚಿತ್ರದಿಂದ ಆಧುನಿಕ ಚಿತ್ರರಂಗದವರೆಗೂ ಕ್ರಿಯಾಶೀಲರಾಗಿ ಕಲಾಸೇವೆ ಸಲ್ಲಿಸಿದ್ದರು. ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿರಸಿಕರ ಮನದಲ್ಲಿ ಮನೆಮಾಡಿದ್ದರು ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.

ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲೂ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದರು. ಲೀಲಾವತಿ ಅವರು ಇಳಿ ವಯಸ್ಸಿನಲ್ಲೂ ಹೋರಾಟದ ಬದುಕು ನಡೆಸಿದ್ದಾರೆ. ಅವರ ಜೀವನ ಪ್ರೀತಿ, ಉತ್ಸಾಹ, ಪ್ರಾಣಿ ದಯೆ, ಕಲ್ಲು ಮುಳ್ಳುಗಳ ಭೂಮಿಯಲ್ಲಿ ಬೆಳೆ ತೆಗೆದ ರೀತಿ ಸೇರಿದಂತೆ ಅವರ ಪ್ರತಿ ಹೆಜ್ಜೆಯೂ ಬೇರೆಯವರಿಗೆ ಆದರ್ಶವಾಗಿದೆ ಎಂದಿದ್ದಾರೆ.

ಇತ್ತೀಚೆಗೆ ಅನಾರೋಗ್ಯದ ನಡುವೆಯೂ ನನ್ನ ಮನೆಗೆ ಬಂದು ಅವರು ಕಟ್ಟಿರುವ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನಿಸಿದ್ದರು. ಅವರ ಇಚ್ಛೆಯಂತೆ ನಾನು ಹೋಗಿ ಆಸ್ಪತ್ರೆ ಉದ್ಘಾಟನೆ ಮಾಡಿ, ಆ ತಾಯಿಯ ಆಶಿರ್ವಾದ ಪಡೆದು ಬಂದಿದ್ದೆ ಎಂದು ತಿಳಿಸಿದ್ದಾರೆ.

ಲೀಲಾವತಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ನೋವಿನ ಕ್ಷಣದಲ್ಲಿ ನಾವು ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಜತೆ ನಿಲ್ಲುತ್ತೇವೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.