ಲಿಬಿಯಾದಲ್ಲಿ ೨.೫ ಟನ್ ಯುರೇನಿಯಂ ಕಳವು

ಲಿಬಿಯಾ, ಮಾ.೧೭-ದಕ್ಷಿಣ ಲಿಬಿಯಾದಲ್ಲಿ ಸಂಗ್ರಹಿಸಲ್ಪಟ್ಟಿದ್ದ ಬರೋಬ್ಬರಿ ೨.೫ ಟನ್ ಗಳಷ್ಟು ನೈಸರ್ಗಿಕ ಯುರೇನಿಯಂ ಕಾಣೆ ಆಗಿದೆ ಎಂದು ವರದಿಯಾಗಿದೆ.

ಲಿಬಿಯಾ ನ್ಯಾಷನಲ್ ಆರ್ಮಿ ಪ್ರಮುಖ ಸ್ಥಳದ ವ್ಯಾಪ್ತಿಯಲ್ಲಿಯೇ ಅಪಾರ ತೂಕದ ಯುರೇನಿಯಂ ಇರಿಸಲಾಗಿತ್ತು.ಆದರೆ, ದುಷ್ಕರ್ಮಿಗಳು ಇದನ್ನು ಕಳವು ಮಾಡಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ದಂಗೆಕೋರರು ಕೃತ್ಯ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೂರ್ವದ ಬಲಿಷ್ಠ ಖಲೀಫಾ ಹಫ್ತಾರ್‌ನ ಸಂವಹನ ವಿಭಾಗದ ಕಮಾಂಡರ್ ಜನರಲ್ ಖಲೀದ್ ಅಲ್-ಮಹಜೌಬ್, ಮಂಗಳವಾರದಂದು, ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ತನಿಖಾಧಿಕಾರಿಗಳು ಯುರೇನಿಯಂ ಕಾಣೆಯಾಗಿದೆ ಎಂದು ವರದಿ ಮಾಡಿದ್ದರು ಎಂದರು.

ಯುರೇನಿಯಂ ಅದಿರಿನ ಸಾಂದ್ರೀಕರಣದ ರೂಪದಲ್ಲಿ ಸುಮಾರು ೨.೫ ಟನ್‌ಗಳಷ್ಟು ನೈಸರ್ಗಿಕ ಯುರೇನಿಯಂ ಅನ್ನು ೧೦ ಡ್ರಮ್‌ಗಳಲ್ಲಿ ಇಡಲಾಗಿತ್ತು ಎಂದು ತಿಳಿಸಿದರು.

ಪರಮಾಣು ವಸ್ತುವನ್ನು ತೆಗೆದುಹಾಕುವ ಸಂದರ್ಭಗಳು ಮತ್ತು ಅದರ ಪ್ರಸ್ತುತ ಸ್ಥಳವನ್ನು ಪತ್ತೆ ಮಾಡಲು ತನಿಖಾ ಸಂಸ್ಥೆಯು ಹೆಚ್ಚಿನ ತನಿಖೆ, ಪರಿಶೀಲನೆ ನಡೆಸುತ್ತದೆ ಎಂದು ಅವರು ವಿವರಿಸಿದರು.

ಯುರೇನಿಯಂ ಸ್ವಾಭಾವಿಕವಾಗಿ ಕಂಡುಬರುವ ಅಂಶವಾಗಿದ್ದು, ಅದನ್ನು ಸಂಸ್ಕರಿಸಿದ ಅಥವಾ ಪುಷ್ಟೀಕರಿಸಿದ ನಂತರ ಪರಮಾಣು-ಸಂಬಂಧಿತ ಬಳಕೆಗಳನ್ನು ಹೊಂದಿರುತ್ತದೆ.

ಯುರೇನಿಯಂ ಅದಿರಿನ ಸಾಂದ್ರತೆಯು ಕಡಿಮೆ ಮಟ್ಟದ ವಿಕಿರಣಶೀಲತೆಯನ್ನು ಹೊರಸೂಸುತ್ತದೆ ಎಂದು ಪರಿಗಣಿಸಲಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಇದನ್ನು ಪರಮಾಣು ಅಸ್ತ್ರವನ್ನಾಗಿ ಮಾಡಲು ಸಾಧ್ಯವಾಗದಿದ್ದರೂ, ಇದನ್ನು ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಕ್ಕೆ ಕಚ್ಚಾ ವಸ್ತುವಾಗಿ ಬಳಸಬಹುದು ಎಂದು ತಜ್ಞರು ಬಿಬಿಸಿಗೆ ತಿಳಿಸಿದ್ದಾರೆ.