ಲಿಕ್ಕರ್, ಆಯುಧ, ಹಣ ಒಯ್ಯುವುದನ್ನು ಪತ್ತೆ ಹಚ್ಚಿ: ಡಿ.ಸಿ

ಬೀದರ,ಮಾ.28: ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಅವರು ನಿನ್ನೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ, ಚೆಕ್‍ಪೋಸ್ಟಗಳ ಸ್ಥಿತಿಗತಿ ಪರಿಶೀಲಿಸಿದರು. ಅಲ್ಲದೇ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಗುರುತಿಸಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿ ಪೂರ್ವಭಾವಿ ಸಭೆ ನಡೆಸಿ ಮತದಾನ ಬಗ್ಗೆ ಜಾಗೃತಿ ಮೂಡಿಸಿದರು.

ಡಿಸಿ, ಸಿಇಓ ಮತ್ತು ಎಸ್ಪಿ ಅವರ ತಂಡವು ಮೊದಲು ತಡೋಳಾ ಮತ್ತು ಕಲಕೋರಾ ಬಳಿ ನಿರ್ಮಿಸಿರುವ ಚೆಕ್‍ಪೋಸ್ಟಗಳಿಗೆ ಭೇಟಿ ನೀಡಿತು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚೆಕ್‍ಪೋಸ್ಟಗಳಲ್ಲಿ ಮೂರು ಪಾಳಿಯಲ್ಲಿ ಕಾರ್ಯನಿರತವಾಗಿರುವ ಸ್ಟ್ಯಾಟಿಕ್ ಸರ್ವೆಲನ್ಸ್ ತಂಡದ ಕಾರ್ಯವೈಖರಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಮತದಾರರಿಗೆ ಹಂಚಲು ಲಿಕ್ಕರ್ಸ್, ಆಯುಧ, ಅಧೀಕ ಪ್ರಮಾಣದಲ್ಲಿ ಹಣ ಒಯ್ಯುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ವಾಹನ ಪರಿಶೀಲನೆ ಮಾಡುವಾಗ ಕಡ್ಡಾಯ ವಿಡಿಯೋ ಮಾಡಬೇಕು. ಪ್ರತಿದಿನ ಕಾರ್ಯಚಟುವಟಿಕೆಗಳ ಬಗ್ಗೆ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಮತದಾನ ಪೂರ್ಣವಾಗುವ ವರೆಗೂ, ಪೂರ್ವಾನುಮತಿಯಿಲ್ಲದೇ ರಜೆ ಮೇಲೆ ತೆರಳದೇ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಮಹಾರಾಷ್ಟ್ರದಿಂದ ಬರುವ ವಾಹನಗಳ ಪರಿಶೀಲನೆಗಾಗಿ ಪ್ರತಾಪೂರ ತಾಂಡಾ ಬಳಿಯಲ್ಲಿ, ಮನ್ನಳ್ಳಿ-ಓಮರ್ಗಾ ಎಂಎಸ್ ಬಾರ್ಡರ್, ಅಂಬೇವಾಡಿ ಕ್ರಾಸ್, ಗೋಟಾಳ ಗಡಿಯಲ್ಲಿ, ಕಲಬುರಗಿ ಗಡಿಯಿಂದ ಬರುವ ವಾಹನಗಳ ಪತ್ತೆಗೆ ಕೋಹೀನೂರ-ಮಹಾಗೊಣಗಾಂವ್ ಮಧ್ಯೆ ಚೆಕ್‍ಪೋಸ್ಟ್ ಸ್ಥಾಪಿಸಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ, ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆ ವರೆಗೆ ಮತ್ತು ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆ ವರೆಗೆ ಒಂದು ಪಾಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡು ಐವರಂತೆ ಮೂರು ಪಾಳಿನಲ್ಲಿ ಒಟ್ಟು 15 ಜನರ ತಂಡವು ಪ್ರತಿ ದಿನ ಚೆಕ್‍ಪೋಸ್ಟಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಇದೆ ವೇಳೆ ಬಸವಕಲ್ಯಾಣ ಸಹಾಯಕ ಆಯುಕ್ತ ಭುವನೇಶ ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.