ಲಿಂ. ವೀರಗಂಗಾಧರ ಶ್ರೀಗಳ ಪುಣ್ಯಾರಾಧನೆ

ಲಕ್ಷ್ಮೇಶ್ವರ, ನ 4- ಒಳ್ಳೆಯ ಆಲೋಚನೆ ಮತ್ತು ಭಾವನೆಗಳಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಪ್ರಪಂಚ ಮತ್ತು ಪಾರಮಾರ್ಥ ಎರಡೂ ಅಮೂಲ್ಯವಾದವುಗಳು. ಬ್ರಹ್ಮಾಂಡ ಬೆಳಗಲು ಸೂರ್ಯ ಬೇಕು. ಹಾಗೆಯೇ ಪಿಂಡಾಂಡ ಬೆಳಗಲು ಗುರುವಿನ ಅಗತ್ಯ ಇದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಮಂಗಳವಾರ ಜರುಗಿದ ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ 38ನೇ ವರ್ಷದ ಪುಣ್ಯಾರಾಧನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಾಗ ಗಾಳಿ ಬೆಳಕು ಬರುವಂತೆ ನಮ್ಮ ಮನದ ಬಾಗಿಲನ್ನು ತೆರೆದಾಗ ಭಗವಂತನ ಬೆಳಕು ತುಂಬಿ ತುಳುಕುತ್ತದೆ. ಗುರು ಮತ್ತು ದೇವರ ದರ್ಶನದಿಂದ ಜೀವನ ಪವಿತ್ರವಾಗುತ್ತದೆ. ಲಿಂ.ರಂ. ವೀರಗಂಗಾಧರ ಜಗದ್ಗುರುಗಳು ತಮ್ಮ ಧರ್ಮ ಚಿಂತನೆ, ಅಧ್ಯಯನ, ಪೂಜೆಗಳ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಅವಿರತ ಶ್ರಮಿಸಿದವರು. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ಶಾಂತಿ ಎಂಬ ಮಂತ್ರ ಸಾರಿದ ವೀರ ಸನ್ಯಾಸಿ’ ಎಂದರಲ್ಲದೆ ‘ಕೊರೊನಾ ವೈರಸ್ ವಿಶ್ವವನ್ನೇ ನಡುಗಿಸಿದೆ. ಇನ್ನೆರಡು ತಿಂಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳವುದು ಬಹಳ ಮುಖ್ಯ. ನಮ್ಮ ಜೀವ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯಬಾರದು’ ಎಂದು ಸಲಹೆ ನೀಡಿದರು.
ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಕ್ಷೇತ್ರದ
ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ‘ತನಗಾಗಿ ಮಾಡುವ ಕೆಲಸ ಲೌಕಿಕ. ಎಲ್ಲರಿಗಾಗಿ ಮಾಡುವ ಕಾರ್ಯ ಅಲೌಕಿಕ. ಲಿಂ.ರಂಭಾಪುರಿ ವೀರಗಂಗಾಧರ ಶ್ರೀಗಳು ಮಾನವ ಧರ್ಮದ ಏಳಿಗೆಗಾಗಿ ದುಡಿದವರು. ಅವರ ಆಧ್ಯಾತ್ಮಿಕ ಚೈತನ್ಯ ಶಕ್ತಿ ನಮ್ಮೆಲ್ಲರ ಬಾಳಿಗೆ ಬೆಳಕಾಗಿದೆ. ಮುಕ್ತಿಮಂದಿರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನಾ ಕಾರ್ಯ ಭರದಿಂದ ಸಾಗಿದ್ದು ಭಕ್ತರು ಈ ಮಹತ್ ಕಾರ್ಯಕ್ಕೆ ತನು, ಮನ, ಧನದಿಂದ ಕೈಜೋಡಿಸಬೇಕು’ ಎಂದರು.
ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ಬಂಕಾಪುರ ರೇವಣಸಿದ್ಧೇಶ್ವರ ಶ್ರೀ, ಚಳ್ಳಕೆರೆ ಸಿದ್ಧವೀರ ಶ್ರೀ, ಕಲಾದಗಿಯ ಗಂಗಾಧರ ಶ್ರೀ, ಲಕ್ಷ್ಮೇಶ್ವರ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಪಿ. ಬಳಿಗಾರ ಇದ್ದರು.
ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಮಹಾಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.