
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ವಿವಿಧ ರೀತಿಯಲ್ಲಿ ಪ್ರತಿಯೊಬ್ಬರ ಪಾಲಿನಲ್ಲೂ ಸಹಕಾರಿಯಾಗುತ್ತಾ, ಬೇರೆಯವರನ್ನೇ ಅವಲಂಬಿಸಿ ಬದುಕುತ್ತಿದ್ದಳು. ಮಹಿಳೆಯು ಹಲವಾರು ಕಾರಣಗಳಿಂದ ಮತ್ತು ಹಲವಾರು ಅವಕಾಶಗಳಿಂದ ವಂಚಿತರಾಗುತ್ತಿದ್ದರು. ಹಿಂದಿನ ಕಾಲದಲ್ಲಿ, ಪುರುಷ ಪ್ರಧಾನವು ಜಾರಿಯಲ್ಲಿತ್ತು. ಇದರಿಂದ ಪುರುಷನೇ ಕುಟುಂಬದ ಶ್ರೇಷ್ಠ ವ್ಯಕ್ತಿಯಾಗಿ ಪರಿಗಣಿಸುತ್ತಿದ್ದರು. ಪುರುಷರು ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಕುಟುಂಬದ ನಿರ್ಧಾರ ತೆಗೆದುಕೊಳ್ಳುವವರಾಗಿದ್ದರು. ಆದರೆ, ಇಂದು ಮಹಿಳೆಯರು ಎಲ್ಲೆಡೆ ಇದ್ದಾರೆ. ಯಾವುದೇ ಮಹಿಳೆ ಆರ್ಥಿಕವಾಗಿ ಸ್ವತಂತ್ರಳಾಗದಿದ್ದರೆ ಸಬಲಳಾಗುವುದಿಲ್ಲ. ಮಹಿಳೆಯರು ಬಯಸಿದ ವಸ್ತುಗಳನ್ನು ಪಡೆಯಲು ತಮ್ಮ ತಂದೆ ಅಥವಾ ಗಂಡನ ಮೇಲೆ ಅವಲಂಬಿತರಾಗುವ ದಿನಗಳು ಹೋಗಿವೆ. ಮಹಿಳಾ ಸಬಲೀಕರಣವು ಸಮಾಜದಲ್ಲಿ ಮಹಿಳೆಗೆ ಸಂತೋಷ ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಅವಕಾಶ ನೀಡುವಲ್ಲಿ ಮುಂದಾಗಬೇಕಿದೆ.ಪ್ರತಿವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುವುದು. ಇಂದಿನ ಮಹಿಳೆಯರು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ. ವಿಶ್ವದಲ್ಲಿ ಅನೇಕ ಮಹಿಳೆಯರು ನಿರಂತರವಾಗಿ ವೈಯಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ. ಎಲ್ಲಾ ಮಹಿಳೆಯರು ತಮ್ಮ ಕಠಿಣ ಪರಿಶ್ರಮದ ಮೂಲಕ ಮೆಚ್ಚುಗೆ ಪಡಯುತ್ತಿದ್ದಾರೆ. ಈ ದಿನ ಮಹಿಳಾ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ವಿಶೇಷ ದಿನ ಇದಾಗಿದೆ. ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಎಷ್ಟೋ ರಾಷ್ಟ್ರಗಳು ತಮ್ಮ ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರನ್ನು ನೆನೆಯಲು ಅವರ ಸಾಧನೆಯನ್ನು ಸಾರಲು ಪಠ್ಯಪುಸ್ತಕದಲ್ಲಿ ಅವರ ಬಗ್ಗೆಯೇ ಪಠ್ಯಕ್ರಮ ಅಳವಡಿಸಿವೆ. ಕರ್ನಾಟಕದಲ್ಲಿ ಕನ್ನಡ ನಾಡಿನ ವೀರ ಮಹಿಳೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಸಾಹಿತ್ಯ ಕ್ಷೇತ್ರದ ಅಕ್ಕಮಹಾದೇವಿ ಹೀಗೆ ಹಲವರ ಕುರಿತು ಪಾಠಗಳಿರುವುದು.ಇಂತಹ ವೀರ ಮಹಿಳೆಯರ ಸಾಧನೆ, ಕೊಡುಗೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿ ಮತ್ತು ಮುಂದಿನ ಪೀಳಿಗೆಯವರಲ್ಲಿ ಉತ್ತಮ ನಾಯಕತ್ವ ಬೆಳೆಯಲಿ ಎಂಬುದೇ ಮುಖ್ಯ ಉದ್ದೇಶ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಸಹ ನಾಡಿನ ವೀರ ಮಹಿಳೆಯರಾದ ಬೆಳವಾಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕ ರವರ ಕುರಿತಾದ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು ಎಂದು ಹೇಳಿದ್ದರು.ಮಹಿಳಾ ದಿನಾಚರಣೆಯನ್ನು ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿಯೂ ಆಚರಿಸಲಾಗುವುದು. 1911 ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯ, ಜಮರ್ನಿ, ಸ್ವಿಜರ್‌ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನರು ಸೇರುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೆಲೆಬ್ರೇಟ್ ಮಾಡಲು ಆರಂಭಿಸಿದರು.ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ ಕೂಲಿ ಚಳುವಳಿಯ ಮೂಲಕ (Labour Movement) ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಆರಂಭಿಸಲಾಯಿತು. ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಹೇಳಲು ಒಂದು ದೊಡ್ಡ ವೇದಿಕೆ ಸೃಷ್ಟಿಯಾಯಿತು. ವಿಶ್ವಸಂಸ್ಥೆಯು 1975 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ಯು ಎನ್ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳ ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷವು ವಿಶ್ವಸಂಸ್ಥೆಯ ಹೊಸ ಹೊಸ ಥೀಮ್ ನೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ ಮತ್ತು ಸರ್ಕಾರಿ ವಲಯದಲ್ಲಿಯೂ ‘ಜೆಂಡರ್ ಪೇ ಗ್ಯಾಪ್’ ಬಗ್ಗೆ ಧ್ವನಿ ಎತ್ತಲಾಗಿದೆ. ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಥೀಮ್ “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂದು ಘೋಷಿಸಿದೆ. “ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣ” ಎನ್ನುವುದಾಗಿದೆ. ದೇಶವು ತನ್ನ ಮಹಿಳಾ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಯನ್ನು ಕಂಡಿತು, ದೇಶವು ಸೈನಾ ನೆಹ್ವಾಲ್ ಅಥವಾ ಪಿ ಟಿ ಉಷಾ ಅವರಂತಹ ಅನೇಕ ಪ್ರಖ್ಯಾತ ಮಹಿಳಾ ಕ್ರೀಡಾಪಟುಗಳನ್ನು ಹೊಂದಿದೆ. ಆದಾಗ್ಯೂ, ಭಾರತದಲ್ಲಿ ಅನೇಕ ಮಹಿಳೆಯರು ಇನ್ನೂ ಪಿತೃಪ್ರಭುತ್ವದ ಹಿಡಿತದಿಂದ ಹೊರಬರಲು ಕಷ್ಟಪಡುತ್ತಿದ್ದಾರೆ – ವಿಶೇಷವಾಗಿ ಗ್ರಾಮೀಣ ವಲಯದಲ್ಲಿ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ನೋಡುವ ಪರಿ ಬದಲಿಸುವ ಪ್ರಯತ್ನ ಮಾಡಲಾಗಿದೆ. ಮಹಿಳೆಯರಿಗೆ ಈ ಜಗತ್ತನ್ನು ಉತ್ತಮ ಮತ್ತು ಸುರಕ್ಷಿತ ಸ್ಥಳವನ್ನಾಗಿ ಬದಲಾಯಿಸಬೇಕಾಗಿದೆ. ತನ್ನ ಕೆಲಸ ಕಾರ್ಯ, ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಮುಂದಾಗಬೇಕು. ಹೆಣ್ಣು ಎಂದು ಗೌರವ ಕೊಡುವುದಕ್ಕಿಂತ ಆಕೆಯೂ ಮನುಷ್ಯಳು ಎಂದು ಗೌರವಿಸುವ ಪದ್ಧತಿ ಶುರುವಾಗಬೇಕಿದೆ.
ಡಾ. ಮೀರಾ ಎಸ್ ಹನಗವಾಡಿ