ಲಿಂಗ ಪೂಜೆ ಲಿಂಗ ಧಾರಣೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ: ಸದಾಶಿವ ಸ್ವಾಮೀಜಿ ಆತಂಕ

ಸೇಡಂ,ಮಾ,23: ಇತ್ತೀಚೆಗೆ ಲಿಂಗಪೂಜೆ ಲಿಂಗಧಾರಣೆ ಮಾಡಿಕೊಳ್ಳದೆ ಮುಂಜಾನೆಯ ಚಟುವಟಿಕೆಗಳು ಆರಂಭವಾಗುತ್ತಿರುವುದು ನೋಡಿದರೆ ಮುಂಬರುವ ದಿನಗಳಲ್ಲಿ ನಿಂಗಪೂಜೆ ಲಿಂಗಧಾರಣೆ ಮಾಡುವರ ಸಂಖ್ಯೆ ಅತ್ಯಂತ ಕಡಿಮೆಯಾಗುವ ಲಕ್ಷಣಗಳು ಎದ್ದು ಕಾಣುತ್ತಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೀಠಾಧಿಪತಿ ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಆಯೋಜಿಸಲಾಗಿರುವ 1008 ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ 46ನೇ ಜಯಂತೋತ್ಸವ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ವೀರಶೈವ ಲಿಂಗಾಯತ ಪರಂಪರೆಯನ್ನು ಮನೆಯಲ್ಲಿ ತಂದೆ ತಾಯಿಯವರು ಬೆಳಿಗ್ಗೆ ಎದ್ದ ತಕ್ಷಣ ಮುಂಜಾನೆ ಕಾರ್ಯಗಳನ್ನು ಮಾಡಿ ಜಳಕಾ ಮಾಡಿ ಲಿಂಗ ಪೂಜೆ ಹಾಗೂ ದೇವರ ಜಗುಲಿ ಪೂಜೆ ಮಾಡುವುದನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ವೇಳೆಯಲ್ಲಿ ತೋಟ್ನಳ್ಳಿಯ ಶ್ರೀಮಹಾಂತೇಶ್ವರ ಮಠದ ಶ್ರೀಗಳಾದ ಷ.ಬ್ರಡಾ ತ್ರಿಮೂರ್ತಿ ಶಿವಾಚಾರ್ಯರು,ಶಿವಶಂಕರೇಶ್ವರ ಮಠದ ಷ. ಬ್ರ.ಶ್ರೀ ಶಿವಶಂಕರ ಶಿವಾಚಾರ್ಯರ ಮಹಾಸ್ವಾಮೀಜಿ,ಹಾಲಪ್ಪಯ್ಯ ವಿರಕ್ತ ಮಠದ ಶ್ರೀಗಳಾದ ಪಂಚಾಕ್ಷರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಮುಂಚಿತವಾಗಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ವರೆಗೆ ವಾದ್ಯಮೇಳಗಳೊಂದಿಗೆ ಜಗದ್ಗುರು ರೇಣುಕಾಚಾರ್ಯರ ಭವ್ಯ ಮೆರವಣಿಗೆ ಮಾಡಲಾಯಿತು. ಈ ವೇಳೆಯಲ್ಲಿ ತೋಟಗಾರಿಕೆ ಮಹಾಮಂಡಳಿಯ ಮಾಜಿ ಅಧ್ಯಕ್ಷರಾದ ಬಸವರಾಜ ಪಾಟೀಲ್ ಊಡಗಿ,ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವೀರೇಂದ್ರ ರುದ್ನೂರ್,ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷರಾದ ಚಂದ್ರಶೆಟ್ಟಿ ಬಂಗಾರ,ಜಯಂತೋತ್ಸವ ಕಾರ್ಯದರ್ಶಿ ಮಹೇಶ ಎಳಮನಿ ಇದ್ದರು. ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು.