ಲಿಂಗಾಯಿತರು ಬಿಜೆಪಿಯಿಂದ ದೂರ ಹೋಗಲ್ಲ : ಸಿಎಂ

ಬೆಂಗಳೂರು, ಏ. ೧೭- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಇರುವತನಕ ಲಿಂಗಾಯತರು ನಮ್ಮ ಜತೆ ಇರುತ್ತಾರೆ ಬಿಜೆಪಿಯಿಂದ ದೂರ ಹೋಗುತ್ತಾಎ ಎಂಬುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬಿಜೆಪಿಯ ಜಗದೀಶ್ ಶೆಟ್ಟರ್ ಸೇರಿದಂತೆ ಕೆಲವರನ್ನು ಸೇರ್ಪಡೆ ಮಾಡಿಕೊಂಡಿರಬಹುದು. ಅದರಿಂದ ನಮ್ಮ ವೋಟ್ ಬ್ಯಾಂಕ್ ಹೋಗುತ್ತದೆ ಎಂಬುದು ಸುಳ್ಳು. ನಮ್ಮ ವೋಟ್ ಬ್ಯಾಂಕ್ ಹೋಗಿಲ್ಲ ಬಿಎಸ್‌ವೈ ಇರುವತನಕ ಲಿಂಗಾಯತರು ನಮ್ಮ ಜತೆ ಇರುತ್ತಾರೆ ಎಂದರು.ಪಕ್ಷ ಬಿಟ್ಟಿರುವ ಜಗಜದೀಶ್ ಶೆಟ್ಟರ್ ಅವರು ಮಾಡಿರುವ ಆರೋಪಗಳು ಸರಿಯಲ್ಲ. ಪಕ್ಷ ಬಿಡುವಾಗ ಒಂದು ನೆಪ ಹೇಳಬೇಕು. ಹಾಗಾಗಿ ಅವರು ನೆಪ ಹೇಳಿದ್ದಾರೆ ಅಷ್ಟೇ ಎಂದರು.ಬಿಜೆಪಿ ಶೆಟ್ಟರ್ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ೨೫ ವರ್ಷದ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್ ಅವರಿಗೆ ಎಲ್ಲ ರೀತಿಯ ಅಧಿಕಾರ ಸ್ಥಾನಮಾನ ಕೊಟ್ಟಿದೆ. ಇಷ್ಟಾದರೂ ಅವರು ಪಕ್ಷ ಬಿಟ್ಟಿದ್ದಾರೆ. ಪಕ್ಷ ಬಿಟ್ಟು ಹೋದಾಗ ಏನಾದರೂ ಒಂದು ಕಾರಣ ಕೊಡಬೇಕು. ಹಾಗಾಗಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣ ಕೊಟ್ಟಿದ್ದಾರೆ ಇದು ನೆಪ ಅಷ್ಟೇ ಎಂದರು.
ಕಾಂಗ್ರೆಸ್ ಪಕ್ಷ ವೀರೇಂದ್ರಪಾಟೀಲ್, ಬಂಗಾರಪ್ಪ, ದೇವರಾಜ ಅರಸು ಅವರನ್ನು ಹೊರ ಹಾಕಿದ್ದರು. ಅಂತಹ ಪಕ್ಷಕ್ಕೆ ಶೆಟ್ಟರ್ ಈಗ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ನಾಯಕರು ಮೊದಲು ಸನ್ಮಾನ ಮಾಡುತ್ತಾರೆ. ಚುನಾವಣೆ ಬಳಿಕ ಅವಮಾನ ಮಾಡುತ್ತಾರೆ. ಜಗದೀಶ್‌ಶೆಟ್ಟರ್ ಅವರನ್ನು ಬಳಸಿಕೊಂಡು ಹೊರಗೆ ಹಾಕುತ್ತಾರೆ ಎಂದು ಬಸವರಾಜಬೊಮ್ಮಾಯಿ ಹೇಳಿದರು. . ಮತ್ತೆ ಬಿಜೆಪಿಗೆ ಶೆಟ್ಟರ್ ವಾಪಸ್ ಬರುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅವರು ಬರುತ್ತಾರೆ ಎಂದು ನಿರೀಕ್ಷೆ ಮಾಡಲ್ಲ ಎಂದರು.