ಲಿಂಗಾಯತ ಹೆಸರಲ್ಲೇ ನಿಗಮ ಸ್ಥಾಪಿಸಿ ಧನ್ನೂರ ಆಗ್ರಹ

ಬೀದರ್:ನ.18: ರಾಜ್ಯ ಸರ್ಕಾರ ಲಿಂಗಾಯತ ಹೆಸರಲ್ಲೇ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಒತ್ತಾಯಿಸಿದ್ದಾರೆ.

ರಾಜ್ಯದ ಬಹುಸಂಖ್ಯಾತ ಲಿಂಗಾಯತರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿಗಮ ಸ್ಥಾಪನೆ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಆದರೆ, ನಿಗಮಕ್ಕೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಎಂದು ಹೆಸರಿಡುವುದನ್ನು ತಾತ್ವಿಕವಾಗಿ ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.

12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತ ಧರ್ಮವು 99 ಒಳ ಪಂಗಡಗಳನ್ನು ಹೊಂದಿದೆ. ಅದರಲ್ಲಿ ವೀರಶೈವ ಕೂಡ ಒಂದಾಗಿದೆ. ಹೀಗಾಗಿ ವೀರಶೈವ-ಲಿಂಗಾಯತ ಹೆಸರಲ್ಲಿ ನಿಗಮ ಸ್ಥಾಪಿಸಿದರೆ ಕೇವಲ ಒಂದು ಪಂಗಡಕ್ಕೆ ಪ್ರಾಶಸ್ತ್ಯ ಕೊಟ್ಟಂತೆ ಆಗಲಿದೆ. ಅದು ಸಂಪೂರ್ಣ ಲಿಂಗಾಯತರ ಅಭಿವೃದ್ಧಿ ನಿಗಮವಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ತಜ್ಞರ ಸಮಿತಿಯು ಅಧ್ಯಯನ ನಡೆಸಿ ದಾಖಲೆಗಳ ಆಧಾರದಲ್ಲಿ ಧರ್ಮಕ್ಕೆ ಲಿಂಗಾಯತ ಪದವೇ ಸೂಕ್ತ ಎಂದು ವರದಿ ನೀಡಿತ್ತು. ಹಿಂದಿನ ಸರ್ಕಾರ ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಲಿಂಗಾಯತ ಸ್ವತಂತ್ರ ಧರ್ಮ ಹಾಗೂ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸನ್ನೂ ಮಾಡಿತ್ತು. ಕಾರಣ, ನಿಗಮಕ್ಕೆ ಲಿಂಗಾಯತ ಎಂದೇ ನಾಮಕರಣ ಮಾಡಬೇಕು. ಇದರಿಂದ ಇಡೀ ಲಿಂಗಾಯತ ಸಮುದಾಯವನ್ನು ಪರಿಗಣಿಸಿದಂತೆ ಆಗಲಿದೆ. ಲಿಂಗಾಯತರ ಸಮಗ್ರ ಅಭಿವೃದ್ಧಿ ಕೂಡ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರು ನಿಗಮಕ್ಕೆ ಲಿಂಗಾಯತ ಹೆಸರಿಡುವ ಮೂಲಕ ಬಸವಾದಿ ಶರಣರನ್ನು ಗೌರವಿಸಬೇಕು. ಲಿಂಗಾಯತ ಧರ್ಮೀಯರ ಅಸ್ಮಿತೆ ಉಳಿವು ಹಾಗೂ ಸಮಗ್ರ ಏಳಿಗೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.