
ಔರಾದ :ಮೇ.15: ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ವೀರಶೈವ ಲಿಂಗಾಯತ ಸಮಾಜದ ಮುಖಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ದ್ಯಾಡೆ ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಈಶ್ವರ ಖಂಡ್ರೆ ಅವರು ಕರ್ನಾಟಕ ಮುಖ್ಯಮಂತ್ರಿಗೆ ಸೂಕ್ತ ವ್ಯಕ್ತಿ, ಸತತ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ಅವರು ಮುಖ್ಯಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಶ್ವರ ಖಂಡ್ರೆ ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದ ಜನಮನ ಗೆದ್ದ ವ್ಯಕ್ತಿ ಅವರು ಕರ್ನಾಟಕ ಮುಖ್ಯಮಂತ್ರಿ ಆಗಲಿ ಎಂಬುದು ಕಲ್ಯಾಣ ಕರ್ನಾಟಕ ಭಾಗದ ಜನರ ಆಶಯ.
ಈಶ್ವರ ಖಂಡ್ರೆ ಅವರದ್ದು ಕಾಂಗ್ರೆಸ್ ನಿಷ್ಠ ಮನೆತನ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಮತ್ತು ದಿ.ವಿಜಯಕುಮಾರ ಖಂಡ್ರೆ ಅವರು ಕಾಂಗ್ರೆಸ್ನಿಂದಲೇ ಶಾಸಕ, ಮಂತ್ರಿ ಆಗಿದ್ದರು. ತಂದೆ ಗರಡಿಯಲ್ಲಿ ಪಳಗಿರುವ ಈಶ್ವರ ಖಂಡ್ರೆ ಅವರೂ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಆಗಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ, ಖಂಡ್ರೆ ಪಕ್ಷನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಭಾಲ್ಕಿ ಕ್ಷೇತ್ರದ ಜನತೆ ಖಂಡ್ರೆ ಮನೆತನದ ಕೈ ಬಿಟ್ಟಿಲ್ಲ ಎನ್ನುವುದೂ ಅಷ್ಟೇ ಸತ್ಯ. ಉತ್ತಮ ವಾಗ್ಮಿಯಾಗಿರುವ ಈಶ್ವರ ಖಂಡ್ರೆ ಅವರಲ್ಲಿ ಸಂಘಟನಾ ಚತುರತೆ, ಸಾಮಥ್ರ್ಯ ಇದೆ. ಈ ಹಿಂದೆ ಲೋಕಸಭಾ ಚುನಾವಣೆ ವೇಳೆ 200ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ. ಅಲ್ಲದೆ ವೀರಶೈವ- ಲಿಂಗಾಯತ ಸಮುದಾಯದ ಪ್ರಬಲ ನಾಯಕತ್ವದ ಗುಣಗಳೂ ಅವರಲ್ಲಿವೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವ ನಾಯಕ ಈಶ್ವರ ಖಂಡ್ರೆ ಅವರಿಗೆ ಸಿಎಂ ಸ್ಥಾನ ನೀಡಿದರೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ರಾಜ್ಯದ ಲಿಂಗಾಯತ ಸಮಾಜದ ಬೇಡಿಕೆ ಈಡೇರಿಸಬೇಕು ಎಂದು ಔರಾದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ಪಿ ದ್ಯಾಡೆ ಅವರು ಒತ್ತಾಯಿಸಿದ್ದಾರೆ.