ಲಿಂಗಾಯತ ವೇದಿಕೆ ಎಲ್ಲೂ ಇಲ್ಲ

ಹುಬ್ಬಳ್ಳಿ,ಮೇ.೮- ಲಿಂಗಾಯತ ವೇದಿಕೆ ಅನ್ನುವುದು ಎಲ್ಲಿಯೂ ಇಲ್ಲವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಾಖಂಡಿತವಾಗಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾದಿಂದ ಕಾಂಗ್ರೆಸ್ ಬೆಂಬಲದ ವಿಚಾರ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ನಾಲ್ಕು ಜನರು ಸೇರಿ ಏನೋ ಹೇಳಿದರೆ ಅದು ಇಡೀ ಲಿಂಗಾಯತ ಸಮುದಾಯದ ಧ್ವನಿ ಆಗುತ್ತಾ ಎಂದು ಪ್ರಶ್ನಿಸಿದರು.
ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂಥ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ, ವೀರಶೈವ ಮಹಾಸಭಾ ಯಾವುದೇ ಸಂಸ್ಥೆಯಡಿ ಸೀಮಿತವಾಗಿ ಕೆಲಸ ಮಾಡುತ್ತಿಲ್ಲ ಚುನಾವಣಾ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಬಳಕೆ ಮಾಡುವುದು ಸರಿಯಲ್ಲ, ಲಿಂಗಾಯತ ಸಮಾಜ ಸಮುದ್ರ ಇದ್ದ ಹಾಗೆ ಎಂದು ನುಡಿದರು.
ಐ.ಟಿ, ಇ.ಡಿ ದಾಳಿಗಳು ಕಾಂಗ್ರೆಸ್ ಬೆಂಬಲಿಗರ ಮೇಲಷ್ಟೇ ಆಗುತ್ತಿವೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸುತ್ತ, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ದಾಳಿಯಾಗುತ್ತದೆ ಅದಕ್ಕೆ ನಾವೇನು ಮಾಡಲು ಆಗುತ್ತದೆ ಮೊದಲು ಅವರಿಗೆ ತಪ್ಪು ಮಾಡುವುದನ್ನು ಬಿಡಲು ಹೇಳಿ ಎಂದು ಸಿ.ಎಂ. ಕುಟುಕಿದರು.
ಬಿಜೆಪಿ ಸರ್ಕಾರದ ೧.೫ ಲಕ್ಷ ಕೋಟಿ ರೂ. ಭ್ರಷ್ಟಾಚಾರದ ಹಣವನ್ನು ರೈತರಿಗೆ ಹಂಚುತ್ತೇವೆ ಎಂಬ ಕಾಂಗ್ರೆಸ್‌ನ ಹೇಳಿಕೆಗೆ, ಅಷ್ಟು ಹಣ ಎಲ್ಲಿಂದ ತರುತ್ತಾರೆ ನನಗೇ ಇದು ಆಶ್ಚರ್ಯವಾಗಿದ್ದು ನೀವೂ ನಂಬುತ್ತೀರಾ ಎಂದು ಮರು ಪ್ರಶ್ನೆ ಹಾಕಿದ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಏನು ಸಾಕ್ಷಿ ಇದೆ ಕೊಡಿ ಎಂದು ಕೇಳಿದ್ದೇನೆ, ಅವರಿಗೆ ಈವರೆಗೂ ಕೊಡಲಾಗಿಲ್ಲ ಎಂದು ತಿರುಗೇಟು ನೀಡಿದರು.
ನಮ್ಮ ಪಕ್ಷದ ರಾಷ್ಟ್ರೀಯ ನಾಯಕರುಗಳಿಗೆ ಕರ್ನಾಟಕದೊಡನೆ ಅವಿನಾಭಾವ ಸಂಬಂಧ ಇದೆ, ಅವರುಗಳು ಎಲ್ಲ ಚುನಾವಣೆಯಲ್ಲೂ ಕರ್ನಾಟಕಕ್ಕೆ ಬಂದಿದ್ದಾರೆ, ಇದು ಕರ್ನಾಟಕ್ಕೆ ದೊಡ್ಡ ಬೂಸ್ಟರ್ ಡೋಸ್ ಸಿಕ್ಕಂತೆ ಎಂದು ಬೊಮ್ಮಾಯಿ ತಿಳಿಸಿದರು.