ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಟ್ಟು ಬಿಡುವುದಿಲ್ಲ

ಬೀದರ: ಅ.30:ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಟ್ಟು ಬಿಡುವುದಿಲ್ಲ. ಮಾನ್ಯತೆ ಸಿಕ್ಕುವ ತನಕ ಕೂಡ ಹೋರಾಟ ನಡೆಸಲಾಗುವುದು. ಕೊರೋನಾ ಕಳೆದ ಬಳಿಕ ಹೋರಾಟ ಮುಂದುವರೆಸಲಾಗುವುದು ಎಂದು ಬಸವಕಲ್ಯಾಣ ಕಲ್ಯಾಣ ಪರ್ವ ಉತ್ಸವ ಸಮಿತಿ ಕಾರ್ಯಾಧ್ಯಕ್ಷರು ಕೂಡ ಆಗಿರುವ ಪೂಜ್ಯ ಮಹಾ ಡಾ.ಮಾತೆ ಗಂಗಾದೇವಿ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದ ಅವರು ಲಿಂಗಾಯತ ಧರ್ಮಕ್ಕೆ ಸಂವಿಧಾನ್ಮಾಕ ಮಾನ್ಯತೆ ಕುರಿತಾದ ಹೋರಾಟ ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ತಾತ್ಕಾಲಿಕ ಮುಂದೂಡಲಾಗಿದೆ. ರ್ಯಾಲಿಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಕೊರೋನಾ ಹಬ್ಬುವ ಸಾಧ್ಯತೆಗಳಿರುವುದರಿಂದ ಸಮಯದ ಸೂಕ್ಷ್ಮತೆಯನ್ನು ಅರಿತು ಹೋರಾಟ ಮುಂದೂಡಲಾಗಿದೆ ಎಂದು ಸ್ಪಷ್ಪಪಡಿಸಿದರು. ಪೂಜ್ಯ ಮಾತೆ ಮಹಾದೇವಿ ಹಾಗೂ ಗದಗ ಶ್ರೀ ಲಿಂಗೈಕ್ಯರಾದ ಬಳಿಕ ಹೋರಾಟ ಸ್ಥಗಿತಗೊಂಡಿಲ್ಲ. ಪೂಜ್ಯರು ಲಿಂಗೈಕ್ಯ ನಂತರ ಅನೇಕ ಕಡೆ ರ್ಯಾಲಿಗಳನ್ನು ಆಯೋಜಿಸಲಾಯಿತು. ಕೊರೋನಾ ಹಿನ್ನೆಲೆ ಮುಂಜಾಗರೂಕತಾ ಕ್ರಮವಾಗಿ ಹೋರಾಟ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು ಮುಂಬರುವ ದಿನಗಳಲ್ಲಿ ಮುಂಬಯಿ ಸೇರಿದಂತೆ ರಾಷ್ಟ್ರದ ವಿವಿಧೆಡೆ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು ನುಡಿದರು.

ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೊರೋನಾ ಕಳೆದ ನಂತರ ವಿವಿಧ ರಾಜ್ಯಗಳಲ್ಲಿ ಹೋರಾಟ ನಡೆಸುವುದರ ಮೂಲಕ ಅಲ್ಲಿನ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ನುಡಿದರು.

ಈ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಕೂಡ ನಡೆಸಲಾಗುವುದು ಎಂದು ಅವರು ತಿಳಿಸಿದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನ ಮಾನ ನೀಡುವಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಶಿಫಾರಸು ಮಾಡಿದೆ ಎಂದು ಪ್ರತಿಪಾದಿಸಿದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಧರ್ಮದ ವಿಷಯದಲ್ಲಿ ಯಾವುದೇ ಸರ್ಕಾರ ಕೂಡ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಜೈನ್ ಧರ್ಮ ಮಾನ್ಯತೆ ಸಂಬಂಧ ಕೂಡ ಕೋರ್ಟ್ ಮೂಲಕವೇ ಪರಿಹಾರ ಪಡೆಯಲಾಗಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ ಸೇರಿ 8 ಸಂಘಟನೆಗಳ ಮೂಲಕ ಕಾನೂನು ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದು ನುಡಿದರು. ಧಾರವಾಡದಲ್ಲಿನ ಅಕ್ಕ ಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷರಾದ ಶ್ರೀ ಜ್ಞಾನೇಶ್ವರಿ ಮಾತಾಜಿ ಮತ್ತು ಸಹ-ಶಿಕ್ಷಕರಾದ ಶಾಂತಾದೇವಿ ಬಿರಾದಾರ್ ಹಾರೂರಗೇರಿ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗಂದಗೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಕುಮಾರ ಸ್ವಾಮಿ, ರಾಷ್ಟ್ರೀಯ ಬಸವ ದಳ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಪಾಟೀಲ್ ಗಾದಗಿ, ರಾಷ್ಟ್ರೀಯ ಬಸವ ದಳ ಬೀದರ್ ತಾಲ್ಲೂಕು ಘಟಕ ಅಧ್ಯಕ್ಷ ಸಂಜೀವ್ ಕುಮಾರ್ ಪಾಟೀಲ್ ಶಿವನಗರ್ ಹಾಗೂ ಬೀದರ್ ಜಿಲ್ಲಾ ಲಿಂಗಾಯತ ಸಮಾಜ ಅಧ್ಯಕ್ಷ ಕುಶಾಲ ರಾವ್ ಪಾಟೀಲ್ ಖಾಜಾಪೂರ್ ಹಾಗೂ ವಿವೇಕಾನಂದ ಪಟ್ನೆ, ರವಿ ಪಾಪಡೆ ಹಾಗೂ ಸಿದ್ದು ಶೆಟಕಾರ್ ಮತ್ತು ರವಿಕಾಂತ್ ಬಿರಾದಾರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಕಲ್ಯಾಣ ಪರ್ವ : ನೇರ ಪ್ರಸಾರ

ಬಸವಕಲ್ಯಾಣದಲ್ಲಿ ಅಕ್ಟೋಬರ್ 30 ರಿಂದ ಆರಂಭವಾಗಲಿರುವ ಎರಡು ದಿನಗಳ 19 ನೆ ಕಲ್ಯಾಣ ಪರ್ವ ಉತ್ಸವವನ್ನು ತಂತ್ರಜ್ಞಾನದ ಮೂಲಕ ನೇರ ಪ್ರಸಾರ ಮಾಡಲಾಗುವುದು. ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಹೆಚ್ಚು ಜನರನ್ನು 19 ನೆ ಕಲ್ಯಾಣ ಪರ್ವ ಉತ್ಸವಕ್ಕೆ ಆಹ್ವಾನಿಸಿಲ್ಲ. ಕಲ್ಯಾಣ ಪರ್ವ ಉತ್ಸವವನ್ನು ಸಂಕ್ಷಿಪ್ತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಬಸವ ಭಕ್ತರು ಕಾರ್ಯಕ್ರಮದಲ್ಲಿ ಭೌತಿಕವಾಗಿ ಭಾಗವಹಿಸಬಹುದು. ಮನೆಯಲ್ಲಿದ್ದೇ ತಂತ್ರಜ್ಞಾನದ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದು ಎಂದು ಪೂಜ್ಯ ಶ್ರೀ ಮಹಾ ಜಗದ್ಗುರು ಡಾ.ಮಾತೆ ಗಂಗಾದೇವಿ ಮತ್ತು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.