ಲಿಂಗಾಯತ ಜಾತಿ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಮನವಿ

ಬ್ಯಾಡಗಿ, ನ 4- ವೀರಶೈವ ಲಿಂಗಾಯತ ಬದಲಾಗಿ ಮೊದಲಿನಂತೆ “ಲಿಂಗಾಯತ” ಎನ್ನುವ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಲಿಂಗಾಯತ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದ ಶ್ರೀಬಸವ ತತ್ವ ಪ್ರಸಾರ ಸಂಸ್ಥೆ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮನವಿ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಭದ್ರಗೌಡ್ರ, ಕಂದಾಯ ಇಲಾಖೆಯಿಂದ ಲಿಂಗಾಯತ ಸಮುದಾಯಕ್ಕೆ 2002 ರವರೆಗೂ “ಲಿಂಗಾಯತ” ಎಂದು ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿತ್ತು. ಆದರೆ 2002 ನಂತರ ಏಕಾಏಕಿ “ವೀರಶೈವ ಲಿಂಗಾಯತ” ಎಂದು ಜಾತಿ ಪ್ರಮಾಣ ಪತ್ರ ನೀಡುತ್ತಿರುವುದು ಲಿಂಗಾಯತ ಸಮುದಾಯವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮೊದಲಿನಂತೆಯೇ “ಲಿಂಗಾಯತ” ಎಂದು ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಯದೇವಪ್ಪ ಶೀಗಿಹಳ್ಳಿ, ಚನ್ನಬಸಪ್ಪ ಎಲಿ, ಸಂತೋಷ ಮೂಲಿಮನಿ, ವಿಜಯ ಕಾಯಕದ, ವೀರಣ್ಣ ಸೋಮನಗೌಡ್ರ, ಸುರೇಶಗೌಡ ಭದ್ರಗೌಡ್ರ, ಎಂ.ಕೆ. ವೀರನಗೌಡ್ರ, ಮಲ್ಲೇಶಪ್ಪ ಹಂಜಿ, ಚನ್ನಬಸವಣ್ಣ ರೊಡ್ಡನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.