ಲಿಂಗಾಯತ ಅಸ್ತ್ರ-ಬಿಜೆಪಿ ನಾಟಕ: ಎಚ್‍ಡಿಕೆ ವಾಗ್ದಾಳಿ

ಮೈಸೂರು: ಮಾ.03:- ಬಿಜೆಪಿಯ ಲಿಂಗಾಯತ ಅಸ್ತ್ರ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಹೀಗಾಗಿಯೇ ಬಿ.ಎಸ್.ಯಡಿಯೂರಪ್ಪ ಅವರನ್ನು ಮೋದಿ ಆಲಿಂಗನ ಮಾಡುತ್ತಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಗುರುವಾರ ಇಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ,ಪಂಚಮಸಾಲಿ ಸಮುದಾಯದ ಸ್ವಾಮೀಜಿ ಅವರಿಂದ 800 ಕಿ.ಮೀ ಪಾದಯಾತ್ರೆ ಮಾಡಿಸಿದ ಬಿಜೆಪಿ, ಒಳಮೀಸಲಾತಿ ವಿಚಾರವಾಗಿಯೂ ಹುಡುಗಾಟಿಕೆ ಮಾಡಿತು. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಈ ಬಾರಿ ಎಷ್ಟು ಸ್ಥಾನ ಗೆಲ್ಲಲಿದೆ ಎಂಬುದು ಗೊತ್ತಾಗಲಿದೆ’ ಎಂದರು.
ಯಡಿಯೂರಪ್ಪ ಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ವೇಳೆ ದೆಹಲಿಗೆ ಹೋದಾಗ ಪ್ರಧಾನಿ, ಗೃಹಸಚಿವರು ಭೇಟಿಗೂ ಸಿಗದೆ ಅವಮಾನ ಮಾಡಿದ್ದರು. ಈಗ ನರೇಂದ್ರ ಮೋದಿ ಅವರೇ ಯಡಿಯೂರಪ್ಪ ಅವರನ್ನು ಆಲಿಂಗನ ಮಾಡಿ ಕೈ ಹಿಡಿದು ಹೋಗುತ್ತಿದ್ದಾರೆ. ಏಕೆ ಈ ಹೊಸ ಬದಲಾವಣೆ' ಎಂದು ಪ್ರಶ್ನಿಸಿದರು. 2023ರ ಚುನಾವಣೆ ಮೂರು ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾಗಿದೆ. ಫಲಿತಾಂಶದ ಮೇಲೆ ಕಾಂಗ್ರೆಸ್, ಬಿಜೆಪಿ ಭವಿಷ್ಯ ನಿಂತಿದೆ. ಬಿಜೆಪಿ ನಾಯಕರೊಬ್ಬರು ಜೆಡಿಎಸ್ ಭವಿಷ್ಯ ತೆಲಂಗಾಣದಲ್ಲಿದ್ದು, ಅಲ್ಲಿಗೆ ಹೋಗಬೇಕೆಂದು ಹೇಳಿದ್ದಾರೆ. ಕರ್ನಾಟಕ ಬಿಟ್ಟು ಯಾರು ಹೋಗುತ್ತಾರೆ ಎಂದು ಜನ ತೀರ್ಮಾನಿಸುತ್ತಾರೆ’ ಎಂದು ವ್ಯಂಗ್ಯವಾಡಿದರು.
ಜೆಡಿಎಸ್‍ಗೆ ಮತ ನೀಡಿದರೆ ವ್ಯರ್ಥ. ಬಿಜೆಪಿಯ ಬಿ ಟೀಂ. 15 ಸ್ಥಾನವೂ ಬರುವುದಿಲ್ಲವೆಂದು ಆರೋಪಿಸುವವರ ನಂಬಿಕೆಗೆ ಒಳಗಾಗಿ ದೇಶದ ಜಾತ್ಯತೀತತೆ ಉಳಿಸಲು ಮೈತ್ರಿ ಸರ್ಕಾರ ಮಾಡಿದ್ದೆವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿದ್ದರಿಂದಲೇ ಪಕ್ಷಕ್ಕೆ ಹಿನ್ನಡೆಯಾಯಿತು. ಈ ಬಾರಿ ಯಾರೊಂದಿಗೂ ಮೈತ್ರಿ ಇಲ್ಲ' ಎಂದರು. ಕೊಟ್ಟ ಕುದುರೆಯನ್ನೇರದವರು ವೀರರು ಅಲ್ಲ ಶೂರರೂ ಅಲ್ಲ ಎಂದು ವಿರೋಧ ಪಕ್ಷ ನಾಯಕರು ಹೇಳುತ್ತಾರೆ. ಅವರು ಕಾಲು ಮುರಿದ ಕುದುರೆ ನೀಡಿ ಮನೆ ಮುರುಕ ಕೆಲಸ ಮಾಡಿದ್ದರು’ ಎಂದು ಟೀಕಿಸಿದರು.
ಮೈಸೂರಿನಲ್ಲಿ ಸಮಾರೋಪ:
ಪಂಚರತ್ನ ಯಾತ್ರೆಯ ಸಮಾರೋಪ ಚಾಮುಂಡೇಶ್ವರಿ ಸನ್ನಿಧಿಯ ಮೈಸೂರಿನಲ್ಲಿ ಇದೇ 22ರಿಂದ 26ರೊಳಗೆ ನಡೆಯಲಿದ್ದು, 10 ಲಕ್ಷ ಕಾರ್ಯಕರ್ತರು, ನಾಗರಿಕರು ಸೇರಲಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದರು. ಹಿಂದುತ್ವ ಬಿಜೆಪಿಗೆ ಚುನಾವಣೆಗೆ ಬಂದಾಗ ನೆನಪಾಗುತ್ತದೆ. ಈ ಬಾರಿ ಅವರ ಆಟ ಫಲಿಸದು. ನಮ್ಮದು ದೇವರನ್ನು ನಂಬಿರುವ ಪಕ್ಷ. ಅತಿ ಹೆಚ್ಚು ಸಂಖ್ಯೆಯಲ್ಲಿ ಯುವಕರು ಜೆಡಿಎಸ್ ಪಂಚರತ್ನ ಯಾತ್ರೆಗೆ ಬರುತ್ತಿದ್ದಾರೆ’ ಎಂದರು.
`ಉರಿಗೌಡ, ನಂಜೇಗೌಡ ಸುಳ್ಳು ಇತಿಹಾಸದ ಕಥೆ ಕಟ್ಟಿದ್ದಾರೆ. ಇತಿಹಾಸವನ್ನು ಬಿಜೆಪಿಯವರೇ ಬರೆಯಲು ಹೊರಟಿದ್ದಾರೆ. ಇಂಥ ತಂತ್ರಗಳು ಫಲಿಸವು. ಮಂಡ್ಯ ಹಾಗೂ ಮೈಸೂರಿನಲ್ಲೂ ಮೊದಲ ಸ್ಥಾನದಲ್ಲಿ ನಾವಿರಲಿದ್ದೇವೆ. ಹಾಸನದಲ್ಲಿ 7 ಕ್ಷೇತ್ರ ಗೆಲ್ಲಲಿದ್ದೇವೆ. 123 ಸ್ಥಾನ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದ್ದೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್‍ಕುಮಾರ್, ಮಹದೇವ್, ಸಿ.ಎನ್.ಮಂಜೇಗೌಡ, ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮಾಜಿ ಮಹಾಪೌರ ಲಿಂಗಪ್ಪ, ಎಂ.ಜೆ.ರವಿಕುಮಾರ್, ರಾಜ್ಯ ವಕ್ತಾರ ರವಿಚಂದ್ರೇಗೌಡ ಇನ್ನಿತರರು ಉಪಸ್ಥಿತರಿದ್ದರು.