ಲಿಂಗಾಯತರ ವಿರುದ್ಧ ಸಂತೋಷ್ ಹೇಳಿಕೆಗೆ ಮೋದಿ ಖಂಡನೆ

ಕಲಬುರಗಿ,ಮೇ 6: ಬಿಜೆಪಿಗೆ ಲಿಂಗಾಯತರ ಅವಶ್ಯಕತೆಯೇ ಇಲ್ಲ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಇಡೀ ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ತೀವ್ರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕೇವಲ ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಕಟ್ಟಬೇಕೆ ಹೊರತು; ಲಿಂಗಾಯತರನ್ನು ನಂಬಿಕೊಂಡು ಪಕ್ಷದ ಹಿತ ಬಲಿ ನೀಡುವುದು ಸರಿಯಲ್ಲ ಎನ್ನುವ ಅರ್ಥದಲ್ಲಿ ಸಂತೋಷ್ ಮಾತನಾಡಿದ್ದಾರೆ. ಆ ಮೂಲಕ ವೀರಶೈವ-ಲಿಂಗಾಯತ ಸಮಾಜದ ಅವಶ್ಯಕತೆಯೇ ಬಿಜೆಪಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಬಿಜೆಪಿಗೆ ಲಿಂಗಾಯತ ಸಮುದಾಯದ ಕುರಿತು ಇರುವ ಧೋರಣೆ ಎಂಥದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮೋದಿ ಕಿಡಿ ಕಾರಿದ್ದಾರೆ.ವೀರಶೈವ-ಲಿಂಗಾಯತ ಸಮುದಾಯದ ಕುರಿತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಆಡಿರುವ ಮಾತುಗಳನ್ನು ಖಂಡಿಸುವ ಎದೆಗಾರಿಕೆ ಆ ಪಕ್ಷದ ಹೈಕಮಾಂಡ್ ಸೇರಿದಂತೆ ಯಾವೊಬ್ಬ ನಾಯಕರಿಗೂ ಇಲ್ಲದಂತಾಗಿದೆ ಎಂದು ಮೋದಿ ಟೀಕಿಸಿದ್ದಾರೆ.ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಮತದಾರರು ಬಿಜೆಪಿಯನ್ನು ತಿರಸ್ಕರಿಸುವ ಮೂಲಕ ವೀರಶೈವ-ಲಿಂಗಾಯತ ಸಮುದಾಯದ ನೈಜ ಶಕ್ತಿ ಏನೆಂಬುದನ್ನು ಸಾಬೀತುಪಡಿಸಬೇಕೆಂದು ಮೋದಿ ಕರೆ ನೀಡಿದ್ದಾರೆ.