
ಬಾಗಲಕೋಟೆ,ಏ.೧೮:ಲಿಂಗಾಯತರನ್ನು ಒಡೆದು ಛಿದ್ರ ಮಾಡಲು ಹೊರಟ ಕಾಂಗ್ರೆಸ್‌ನವರಿಗೆ ಚುನಾವಣೆ ಹತ್ತಿರವಾಗುತ್ತಿರುವಂತೆ ಲಿಂಗಾಯತರ ಮೇಲೆ ಇದ್ದಕ್ಕಿದಂತೆ ಪ್ರೀತಿ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಮುಧೋಳ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯ ಜಾಗೃತ ಸಮುದಾಯ, ಸರಿಯಾದ ತೀರ್ಮಾನವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಶಕ್ತಿ ಇರುವ ಸಮುದಾಯವಾಗಿದೆ. ಅವರು ಸರಿಯಾದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷ ೨೦೦೯ರಲ್ಲಿ ಪಂಚಮಸಾಲಿ ಲಿಂಗಾಯತರನ್ನು ೨ಎ ಗೆ ಸೇರಿಸಲು ವಿರೋಧಿಸಿತ್ತು. ನಂತರ ೨೦೧೮ರಲ್ಲಿ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು ಎಂಬುದನ್ನು ಬೊಮ್ಮಾಯಿ ನೆನಪು ಮಾಡಿ ಕಾಂಗ್ರೆಸ್ ಲಿಂಗಾಯತರ ವಿರೋಧಿಯಾಗಿ ನಡೆದುಕೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಿಲೇಬಿ ಫೈಲ್ ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.
ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚು ಮಾಡಿ ೨ಡಿ ಪ್ರವರ್ಗಕ್ಕೆ ಬಿಜೆಪಿ ಸರ್ಕಾರ ಸೇರಿಸಿತು. ಆದರೆ, ಕಾಂಗ್ರೆಸ್ ಪರೋಕ್ಷವಾಗಿ ಕೆಲವರನ್ನು ಎತ್ತಿ ಕಟ್ಟಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ ಎಂದರು.
ಬಿಜೆಪಿ ಯಾರ ಕಪಿಮುಷ್ಠಿಯಲ್ಲೂ ಇಲ್ಲ, ನಮ್ಮದು ರಾಷ್ಟ್ರೀಯ ಪಕ್ಷ ಒಂದು ವ್ಯವಸ್ಥೆ ಇದೆ. ಅದರಂತೆ ತೀರ್ಮಾನಗಳಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಜಗದೀಶ್ ಶೆಟ್ಟರ್ ಅವರ ಹೆಸರನ್ನು ರಾಜ್ಯ ಚುನಾವಣಾ ಸಮಿತಿ ಕಳುಹಿಸಿತ್ತು. ಆದರೆ ವರಿಷ್ಠ ಮಟ್ಟದಲ್ಲಿ ತೀರ್ಮಾನವಾಗಿದೆ. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ತೊಂದರೆ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದರು.