ಲಿಂಗಾಯತರ ಅಸಮಾಧಾನ ತಣಿಸಲು ಬಿಜೆಪಿ ಯತ್ನಕೊನೆಗೂ ಲಿಂಗಾಯತ ಸಮುದಾಯಕ್ಕೆ ನ್ಯಾಯ ನೀಡಿದ ರಾಜ್ಯ ಸರಕಾರ

ಮಹೇಶ್ ಕುಲಕರ್ಣಿ
ಸಂಜೆವಾಣಿ ಫಲಶ್ರುತಿ
ಚಿತ್ತಾಪುರ ಜು 16: ಕ್ಷೇತ್ರದ ಪ್ರಬಲ ಲಿಂಗಾಯತ ಒಳಪಂಗಡವಾಗಿರುವ ದೀಕ್ಷಾ- ಪಂಚಮಸಾಲಿ ಸಮುದಾಯದ ಸಿಟ್ಟು ತಣ್ಣಗಾಗಿಸಲು ರಾಜ್ಯ ಸರಕಾರ ಕೊನೆಗೂ ಒಂದು ಸಕಾರಾತ್ಮಕ ಹೆಜ್ಜೆಯಿಟ್ಟಿದೆ. ಆ ಮೂಲಕ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹುದ್ದೆಯನ್ನು ದೀಕ್ಷಾ-ಪಂಚಮಸಾಲಿ ಸಮುದಾಯಕ್ಕೆ ನೀಡುವ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಸಮುದಾಯವನ್ನು ತಾನು ವಿಶ್ವಾಸಕ್ಕೆ ತೆಗೆದುಕೊಂಡಿರುವುದಾಗಿ ಸಂದೇಶ ರವಾನಿಸುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಪ್ರಬಲ ವೀರಶೈವ-ಲಿಂಗಾಯತ ಸಮುದಾಯದ ಅಧಿಕಾರಿಗಳು ಮತ್ತು ನೌಕರ ವರ್ಗವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸಮುದಾಯದ ಕೆಲವು ಮುಖಂಡರು ರಹಸ್ಯ ಸಭೆ ನಡೆಸಿರುವ ಕುರಿತು ಸಂಜೆವಾಣಿ ಪತ್ರಿಕೆ ಜೂನ್ 23ರಂದು ರಹಸ್ಯ ಸಭೆ: ಬಿಜೆಪಿ ಪಾಳೆಯದಲ್ಲಿ ಕಂಪನ ಆರಂಭ ಎಂಬ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ವೀರಶೈವ-ಲಿಂಗಾಯತ ಸಮುದಾಯದಲ್ಲಿ ಈ ಕುರಿತು ಭಾರಿ ಚರ್ಚೆ ಆರಂಭಗೊಂಡು ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಈ ಬಗ್ಗೆ ಬಿಸಿ ಮುಟ್ಟಿಸುವ ಕುರಿತು ರಹಸ್ಯ ಮಾತುಕತೆಗಳು ಕೂಡ ಆರಂಭಗೊಂಡಿದ್ದವು. ಈ ಕುರಿತು ರಾಜ್ಯ ಸರಕಾರಕ್ಕೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಈಗ ಪ್ರಬಲ ದೀಕ್ಷಾ-ಪಂಚಮಸಾಲಿ ಸಮುದಾಯದ ಆನಂದ ಶಾಂತಪ್ಪ ಪಾಟೀಲ್ ನರಿಬೋಳ ಅವರಿಗೆ ಚಿತ್ತಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ನೀಡಿ ಸಮಯದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.
ಚುನಾವಣಾ ದೃಷ್ಟಿಯಿಂದ ಲಿಂಗಾಯತ ಪಂಚಮಸಾಲಿ- ದೀಕ್ಷಾ ಸಮುದಾಯದ ವಿಶ್ವಾಸ ಗಳಿಸದೆ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಆಭ್ಯರ್ಥಿಯಾಗಿ ಯಾರೇ ಕಣಕ್ಕಿಳಿದರೂ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಸಂದೇಶ ಅದಾಗಲೇ ಬಿಜೆಪಿ ಹೈಕಮಾಂಡಿಗೆ ರವಾನೆಯಾಗಿತ್ತು. ಇನ್ನು ಈ ಕುರಿತು ಈಗಿನಿಂದಲೇ ಕಾರ್ಯತಂತ್ರ ರೂಪಿಸದೆ ಹೋದರೆ ಚುನಾವಣೆಯ ಹೊತ್ತಿಗೆ ಈಗಿನ ಸಣ್ಣ ಗಾಯ ಮುಂದೆ ಕ್ಯಾನ್ಸರ್ ಗಡ್ಡೆಯ ರೂಪ ಪಡೆಯುವ ಸಂಭವನೀಯತೆ ಎದುರಾಗಬಹುದು. ಹಾಗಾಗಿ, ಈಗಿನಿಂದಲೇ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಾಮಾಣಿಕ ಯತ್ನಗಳನ್ನು ನಡೆಸಬೇಕೆಂದು ಬಿಜೆಪಿಯ ಲಿಂಗಾಯತ ಮುಖಂಡರು ರಾಜ್ಯ ಸರಕಾರದ ಗಮನ ಸೆಳೆದಿದ್ದರು. ಹಾಗಾಗಿ, ಇತ್ತೀಚೆಗೆ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನದಿಂದ ಲಿಂಗಾರಡ್ಡಿ ಭಾಸರಡ್ಡಿ ಅವರನ್ನು ಕೈಬಿಟ್ಟ ಬೆನ್ನಲ್ಲಿಯೇ ದೀಕ್ಷಾ-ಪಂಚಮಸಾಲಿ ಸಮುದಾಯದ ಆನಂದ ಪಾಟೀಲ್ ನರಿಬೋಳ ಅವರಿಗೆ ಚಿತ್ತಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿ ಸಮುದಾಯವನ್ನು ಹುಮ್ಮಸ್ಸಿನಲಿಡುವ ಯತ್ನ ಮಾಡಲಾಗಿದೆ.


ವಿಜಯೇಂದ್ರ ಭೇಟಿಗೂ ಯತ್ನ
ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿರುವ ಕುರಿತುತಮ್ಮ ಪ್ರಖರ ಅಸಮಾಧಾನ ವ್ಯಕ್ತಪಡಿಸಲು ಲಿಂಗಾಯತ ಸಮುದಾಯದ ಕೆಲವು ಯುವ ಮುಖಂಡರು ಕಳೆದ ಕೆಲವು ದಿನಗಳಿಂದ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ, ಅವರೆದುರು ತಮ್ಮ ಬೇಸರ ವ್ಯಕ್ತಪಡಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ವಿಜಯೇಂದ್ರ ಅವರು ಆ ಹೊತ್ತಿಗೆ ತಮ್ಮ ತಂದೆ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪೂರ್ಣ ಕುಟುಂಬದೊಂದಿಗೆ ವಿದೇಶ ಪ್ರವಾಸದಲ್ಲಿದ್ದರು. ಹಾಗಾಗಿ ಅವರ ಭೇಟಿಗೆ ಅವಕಾಶ ಸಾಧ್ಯವಾಗಿರಲ್ಲಿಲ್ಲ. ಇತ್ತೀಚೆಗಷ್ಟೇ ವಿಜಯೇಂದ್ರ ಪ್ರವಾಸ ಮುಗಿಸಿ ಹಿಂದಿರುಗಿದ್ದು, ಮತ್ತೊಮ್ಮೆ ಅವರ ಭೇಟಿಗಾಗಿ ದಿನಾಂಕ ನಿಗದಿಪಡಿಸಿಕೊಳ್ಳುವ ಯತ್ನಗಳು ಮತ್ತೊಮ್ಮೆ ಜೀವ ಪಡೆದಿವೆ ಎಂದು ಚಿತ್ತಾಪುರದ ಬಿಜೆಪಿ ಹಿರಿಯ ಲಿಂಗಾಯತ ಮುಖಂಡರೊಬ್ಬರು ಹೇಳುತ್ತಾರೆ.