ಲಿಂಗಾಯತರಿಗೆ ಸಿಎಂ ಹುದ್ದೆ ನಿರ್ಣಯವಿಲ್ಲ:ಬೊಮ್ಮಾಯಿ

ಬೆಂಗಳೂರು,ಏ.೨೦:ಲಿಂಗಾಯತ ಸಮುದಾಯದವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ಲಿಂಗಾಯತರಿಗೆ ಸಿಎಂ ಹುದ್ದೆ ನೀಡಬೇಕೆಂಬ ಬಗ್ಗೆ ಕೆಲವರು ಸಲಹೆ ಕೊಟ್ಟಿದ್ದಾರೆ. ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಲಿಂಗಾಯತರ ಭಾವನೆಗಳನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಲಿಂಗಾಯತ ವಿರೋಧಿಯಾಗಿದೆ. ೧೯೬೭ ರಿಂದಲೂ ಇದುವರೆಗೂ ಒಬ್ಬ ಲಿಂಗಾಯತರಿಗೆ ಸಿಎಂ ಹುದ್ದೆ ನೀಡಿರಲಿಲ್ಲ. ೯ ತಿಂಗಳು ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಅವರನ್ನು ಸರಿಯಾಗಿ ನಡೆಸಿಕೊಡಲಿಲ್ಲ. ವಿಮಾನ ನಿಲ್ದಾಣದಲ್ಲೇ ಅವರನ್ನು ತೆಗೆದು ಹಾಕಿದರು.
ರಾಜಶೇಖರ್‌ಮೂರ್ತಿ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಲಿಂಗಾಯತ ಧರ್ಮವನ್ನೇ ಒಡೆಯಲ್ ಕಾಂಗ್ರೆಸ್ ಮುಂದಾಗಿತ್ತು. ಮತ ಬ್ಯಾಂಕ್‌ಗಾಗಿ ಧರ್ಮ ಒಡೆಯಲು ಕಾಂಗ್ರೆಸ್‌ನವರು ಪ್ರಯತ್ನಿಸಿದ್ದರು. ಜನ ಇದನ್ನೆಲ್ಲ ಮರೆತಿಲ್ಲ. ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು ಹಾಗೂ ಲಿಂಗಾಯತರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಇದಕ್ಕೆ ತಿರುಗೇಟು ನೀಡುವ ಕುರಿತು ಚರ್ಚೆ ನಡೆಯಿತು ಎಂದರು.ಕನಕಪುರದಲ್ಲಿ ನಮ್ಮ ಪ್ರಚಾರ ಮಿಲಿಟರಿ ಹೋಟೆಲ್‌ನಿಂದಲೇ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು. ಕನಕಪುರದಲ್ಲಿ ಸಾಮಾನ್ಯ ಜನತೆ ಬರುತ್ತಾರೆ, ಅಂತಹ ಸಾಮಾನ್ಯ ಜನರನ್ನು ಡಿಕೆಶಿ ಭೇಟಿ ಮಾಡಲ್ಲ. ಸಾಮಾನ್ಯ ಜನರನ್ನು ಭೇಟಿ ಮಾಡುವ ಸಲುವಾಗಿ ಅಶೋಕ್‌ರವರು ಕನಕಪುರದಿಂದಲೂ ಸ್ಪರ್ಧಿಸುತ್ತಾರೆ ಎಂದರು.ಮಿಲಿಟರಿ ಹೋಟೆಲ್‌ಗೆ ಏಕೆ ಹೋಗಬಾರದು, ಅದರಲ್ಲಿ ತಪ್ಪೇನಿದೆ, ವಲಸಿಗರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ವರುಣಾದಲ್ಲಿ ಬಿಜೆಪಿ-ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಎದಿರೇಟು ನೀಡಿದ ಅವರು, ಎಲ್ಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸ್ಪರ್ಧಿಸುತ್ತಾರೆ. ಆದರೆ, ಸಿದ್ದರಾಮಯ್ಯರವರಿಗೆ ಭಯ ಹುಟ್ಟಿಕೊಂಡಿದೆ. ವರುಣಾ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದ್ದಾರೆ. ಸಿದ್ದರಾಮಯ್ಯರವರಿಗೆ ಸ್ವಂತ ಬಲವಿದ್ದರೆ ಗೆಲ್ಲುತ್ತಾರೆ. ಇಲ್ಲದಿದ್ದರೆ ಸೋಲುತ್ತಾರೆ ಎಂದರು.
ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಕೈಜೋಡಿಸಿದೆ. ಇದರಿಂದ ತಮಗೆ ಯಾವುದೇ ಭಯವಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ಎಲ್ಲರೂ ಕಾಂಗ್ರೆಸ್‌ನಿಂದ ಸ್ಪರ್ಧಿಸಲುಉ ಪ್ರಯತ್ನ ಮಾಡಿದ್ದರು. ಆದರೆ, ಕಾಂಗ್ರೆಸ್‌ನಿಂದ ಒಬ್ಬರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಲ್ಲವೇ ಎಂದು ಪ್ರಶ್ನಿಸಿದರು.