ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ: ವೀರಶೈವ ಸಮಾಜದ ಪಟ್ಟು

ಕಲಬುರಗಿ,ಮೇ.15: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಮುಖ್ಯಮಂತ್ರಿ ಮಾಡಬೇಕು ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ ಅವರು ಒತ್ತಾಯಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಸರ್ಕಾರ ಬರಲು ವೀರಶೈವ ಲಿಂಗಾಯತರು ಪಕ್ಷಕ್ಕೆ ಮತ ಹಾಕಿದ್ದರಿಂದ ಸಾಧ್ಯವಾಗಿದೆ. ಆದ್ದರಿಂದ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದರು.
ಕಳೆದ 1989ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ವೀರೇಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಆದಾಗ ಸುಮಾರು 178 ಜನ ಶಾಸಕರು ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು. ಇದರಿಂದಾಗಿ ಪಕ್ಷವು ವೀರೇಂದ್ರ ಪಾಟೀಲ್ ಅವರಿಗೆ ಮುಖ್ಯಮಂತ್ರಿ ಮಾಡಿತ್ತು. ಪೂರ್ಣಾವಧಿಯವರೆಗೆ ಅವರನ್ನು ಮುಂದುವರೆಸದೇ ಅನಾರೋಗ್ಯದ ಕಾರಣ ಅವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಇದರಿಂದ ವೀರಶೈವ ಲಿಂಗಾಯತರು ಅಸಮಾಧಾನಗೊಂಡು ಕಾಂಗ್ರೆಸ್ ಕಡೆಗೆ ಮುಖ ತೋರಿಸಿರಲಿಲ್ಲ ಎಂದು ಅವರು ಹೇಳಿದರು.
ಈಗ ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಕೆಲ ನಿರ್ಣಯಗಳಿಗೆ ಬೇಸತ್ತು ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಬಹುಮತವೂ ಬಂದಿದೆ. ಜೊತೆಗೆ ಈಗಿರುವ ಕಾಂಗ್ರೆಸ್ಸಿನಲ್ಲಿ ಸುಮಾರು 39 ಜನ ಲಿಂಗಾಯತ ಶಾಸಕರಿದ್ದಾರೆ. ಹಾಗಾಗಿ ಲಿಂಗಾಯತರಿಗೆ ಮುಖ್ಯಮಂತ್ರಿ ಏಕೆ ಮಾಡಬಾರದು? ಎಂದು ಅವರು ಪ್ರಶ್ನಿಸಿದರು.
ಆಯ್ಕೆಯಾದ ಲಿಂಗಾಯತ ಶಾಸಕರಲ್ಲಿ ಹಿರಿಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ, ಪ್ರಭಾವಿ ಮುಖಂಡರಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಅವರು ಇದ್ದಾರೆ. ಅವರಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಸ್ಥಾನ ಕೊಡಬಹುದಾಗಿದೆ ಎಂದು ಅವರು ತಿಳಿಸಿದರು.
ಕಳೆದ ಬಾರಿಯ ಸರ್ಕಾರದಲ್ಲಿ ಜಿಲ್ಲೆಯಿಂದ ಯಾರೊಬ್ಬರೂ ಸಚಿವರಾಗಿರಲಿಲ್ಲ. ಈ ಬಾರಿ ಏಳು ಜನ ಶಾಸಕರಿದ್ದು, ಅವರಲ್ಲಿ ನಾಲ್ವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ ಸಮಾಜಕ್ಕೆ ಮತ್ತು ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಶೈಲ್ ಘೂಳಿ, ಉಪಾಧ್ಯಕ್ಷ ಶಶಿಕಾಂತ್ ಪಾಟೀಲ್, ಚಂದ್ರಶೇಖರ್ ತಳ್ಳಳ್ಳಿ, ಮಂಜುರೆಡ್ಡಿ, ಸಂಗಮೇಶ್ ನಾಗನಳ್ಳಿ, ಸೋಮು ಪಾಟೀಲ್ ಬಂಗರಗಾ ಮುಂತಾದವರು ಉಪಸ್ಥಿತರಿದ್ದರು.