ಲಿಂಗಾಯತರಿಗೆ ಮೀಸಲಾತಿ ನೀಡಲು ಆಗ್ರಹಿಸಿ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ

ಕಲಬುರಗಿ,ನ.17-ಲಿಂಗಾಯತರಿಗೆ ಮಹಾರಾಷ್ಟ್ರ ಮಾದರಿ 16 ಪರ್ಸೆಂಟ್ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಸ್ಟೇಷನ್ ಬಬಲಾದನ ಬೃಹನ್ಮಠದ ರೇವಣಸಿದ್ದ ಶಿವಾಚಾರ್ಯರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, 16 ಪರ್ಸೆಂಟ್ ಮೀಸಲಾತಿಗಾಗಿ ಕಲಬುರ್ಗಿಯಲ್ಲಿ ಎರಡು ವರ್ಷದ ಹಿಂದೆ ಹೋರಾಟ ಪ್ರಾರಂಭವಾಗಿದ್ದು, ಈಗ ಮತ್ತೆ ಹೋರಾಟ ಪ್ರಾರಂಭವಾಗಿದೆ. ಮೀಸಲಾತಿ ಸಿಗುವವರೆಗೂ ವೀರಶೈವ ಮಹಾಸಭೆಯ ಹೋರಾಟ ಮುಂದುವರೆಯಲಿ, ಮೀಸಲಾತಿ ಸಿಗುವವರೆಗೂ ಹೋರಾಟ ಮಾಡೋಣ ಎಂದು ಹೇಳಿದರು.
ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆ ಯ ಶೇ.18ರಷ್ಟು ಲಿಂಗಾಯತರಿದ್ದು, ಲಿಂಗಾಯಿತರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳಲ್ಲಿ ಮೀಸಲಾತಿ ನೀಡಬೇಕು ಎಂಬುವುದು ಬಹು ದಿನಗಳ ಬೇಡಿಕೆಯಾಗಿದೆ. ರಾಜ್ಯದ 6.5 ಕೋಟಿ ಜನ ಸಂಖ್ಯೆಯ ಪೈಕಿ ಲಿಂಗಾಯತರ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚಿದೆ. ಇಷ್ಟು ದೊಡ್ಡ ಜನಸಂಖ್ಯೆಗೆ ಸಿಗುತ್ತಿರುವ ಮೀಸಲಾತಿ ಸೌಲಭ್ಯಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ನೆರೆಯ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಲಿಂಗಾಯತರಿಗೆ 16, 18 ರಷ್ಟು ಮೀಸಲಾತಿಯನ್ನು ಶಿಕ್ಷಣ-ಉದ್ಯೋಗ, ಶಿಷ್ಯವೇತನ ಸೇರಿದಂತೆ ಎಲ್ಲ ಸೌಲಭ್ಯಗಳಲ್ಲಿ ನೀಡುವ ಮೂಲಕ ಲಿಂಗಾಯಿತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಒಂದು ಲಕ್ಷ ಸಹಿ ಸಂಗ್ರಹಿಸಿದ ನಂತರ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಸಹಿ ಸಂಗ್ರಹ ಪತ್ರಗಳನ್ನು ಸಲ್ಲಿಸಲಾಗುವುದು. ಮರಾಠ ಮಾದರಿ ಮೀಸಲಾತಿಯ ಜೊತೆಗೆ ಇತರ ಸಮುದಾಯದ ಅಭಿವೃದ್ಧಿ ಮಂಡಳಿಗಳಂತೆ ಲಿಂಗಾಯತ ಅಭಿವೃದ್ಧಿ ಮಂಡಳಿ ಕೂಡ ರಚಿಸಿ ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ವೀರಶೈವ ಮಹಾಸಭೆಯ ಜಿಲ್ಲಾ ಯುವ ಘಟಕ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಆಗ್ರಹಿಸಿದರು.
ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಡಾ.ಅರುಣಕುಮಾರ ಪಾಟೀಲ ಕೊಡಲಹಂಗರಗಾ ಮಾತನಾಡಿ, ಲಿಂಗಾಯತರಿಗೆ 14 ಪರ್ಸೆಂಟ್ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನೆಗಳು. ರಾಜ್ಯ ಸರ್ಕಾರ ಕೂಡಲೇ ಮೀಸಲಾತಿಯನ್ನು ಲಿಂಗಾಯಿತರಿಗೆ ಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವೀರಶೈವ ಮಹಾಸಭೆಯ ಉಪಾಧ್ಯಕ್ಷರಾದ ರಾಜುಗೌಡ ನಾಗನಹಳ್ಳಿ, ನಗರ ಘಟಕ ಅಧ್ಯಕ್ಷರಾದ ಉದಯ ಪಾಟೀಲ, ಕಾರ್ಯಕಾರಣಿ ಸದಸ್ಯರಾದ ಜಿ.ಕೆ.ಪಾಟೀಲ ಹರಸೂರು, ಬಿ.ಸಿ. ಪಾಟೀಲ, ಮಹೇಶ ಕೆ. ಪಾಟೀಲ, ಡಾ. ರಾಜಶೇಖರ ಬಂಡೆ, ಮಲ್ಲಿನಾಥ್ ಪಾಟೀಲ, ತಾತಗೌಡ ಪಾಟೀಲ, ಮೃತ್ಯುಂಜಯ ಮಲ್ಲಾಪುರ ಮಠ, ಮಲ್ಲು ಬನ್ನೂರ, ಮಲ್ಲು ಕಣ್ಣಿ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.