ಲಿಂಗಸುಗೂರು ತಾಲೂಕ ಅಭಿವೃದ್ಧಿಗೆ ಬದ್ದ : ಸಂಸದ

ಲಿಂಗಸುಗೂರು.ಅ.೩೧-ತಾಲೂಕಿನವರಾದ ನಾವೇ ಸಂಸದರಾಗಿರುವ ಕಾರಣ ನಮ್ಮ ತಾಲೂಕು ಅಭಿವೃದ್ಧಿಯಾಗಬೇಕು ಎನ್ನುವ ಕನಸನ್ನೂ ನಾವೂ ಕಂಡಿದ್ದೇವೆ. ಚುನಾವಣೆಗೆ ಮಾತ್ರ ರಾಜಕೀಯವನ್ನು ಮೀಸಲಾಗಿಟ್ಟು, ಅಭಿವೃದ್ಧಿ ವಿಷಯದಲ್ಲಿ ಶಾಸಕರೊಂದಿಗೆ ಚರ್ಚಿಸಿ ತಾಲೂಕು ಅಭಿವೃದ್ಧಿಗೆ ಬದ್ದರಾಗಿದ್ದವೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿ, ಎಕ್ಸ್‌ಪ್ರೆಸ್ ವೇ ಸೇರಿ ತಾಲೂಕಿನ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಅಲ್ಲದೇ ಹಲವು ರಸ್ತೆಗಳ ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಂಸದರು ಹೇಳಿದರು.
ರಾಯಚೂರು ಜಿಲ್ಲೆಯಲ್ಲಿಯೇ ಲಿಂಗಸುಗೂರು ಹಳೆದ ಉಪವಿಭಾಗ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಇನ್ನೂ ಕೆಲವೊಂದು ಸರಕಾರಿ ಕಚೇರಿಗಳ ಕೊರತೆ ಇದೆ. ನೀತಿ ಸಂಹಿತೆ ತೆರವಾದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ತಾಲೂಕಿನ ಅಭಿವೃದ್ಧಿಗಾಗಿ ಅಗತ್ಯ ಸರಕಾರಿ ಕಚೇರಿಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು.
ಸ್ಲಂಬೋರ್ಡ್ ಮನೆಗಳು ಸ್ಥಳಾಂತರವಾಗಿವೆ ಎನ್ನುವ ಮಾಹಿತಿ ತಪ್ಪಾಗಿದೆ. ಕರಡಕಲ್ ಮತ್ತು ಕಸಬಾಲಿಂಗಸುಗೂರ ಬಳಿ ಒಂದೊಂದು ಎಕರೆ ಸರಕಾರಿ ಜಮೀನು ಇದ್ದು, ಈಗಾಗಲೇ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಬರುವ ದಿನಗಳಲ್ಲಿ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಶಾಸಕ ಡಿ.ಎಸ್.ಹೂಲಗೇರಿ ಇದೇ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ್, ತಹಸೀಲ್ದಾರ್ ಚಾಮರಾಜ ಪಾಟೀಲ್, ಪುರಸಭೆ ಉಪಾದ್ಯಕ್ಷ ಮಹ್ಮದ್‌ರಫಿ, ಮುಖಂಡರಾದ ರಾಜಾ ಸೋಮನಾಥ ನಾಯಕ, ನಂದೀಶ ನಾಯಕ, ಪಿಡ್ಡಪ್ಪ ನಾಯಕ, ಮುದುಕಪ್ಪ ನಾಯಕ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇದ್ದರು.