ಲಿಂಗಪ್ಪನಪಾಳ್ಯದಲ್ಲಿ ಸಂಭ್ರಮದ ಶ್ರೀರಾಮನವಮಿ ಆಚರಣೆ

ಹುಳಿಯಾರು, ಏ. ೧- ಹೋಬಳಿಯ ಲಿಂಗಪ್ಪನಪಾಳ್ಯದಲ್ಲಿ ಸಂಭ್ರಮ ಮತ್ತು ಸಡಗರದಿಂದ ಶ್ರೀರಾಮನವಮಿ ಆಚರಿಸಲಾಯಿತು.
ಲಿಂಗಪ್ಪನಪಾಳ್ಯದಲ್ಲಿ ಶ್ರೀರಾಮನ ದೇಗುಲ ಇರುವುದರಿಂದ ಈ ಊರಿನಲ್ಲಿ ರಾಮನವಮಿ ಆಚರಣೆಗೆ ವಿಶೇಷ ಒತ್ತು ನೀಡಲಾಗುತ್ತದೆ. ಗ್ರಾಮದ ಮನೆ ಮನೆಗಳನ್ನು ತಳಿರು ತೋರಣದಿಂದ ಬಣ್ಣ ಬಣ್ಣದ ರಂಗೋಲಿಯಿಂದ ಸಿಂಗರಿಸಿಕೊಳ್ಳುತ್ತವೆ. ಪ್ರತಿ ಮನೆಯಲ್ಲೂ ಒಬ್ಬಟ್ಟಿನ ಅಡಿಗೆ ಮಾಡಲಾಗುತ್ತದೆ. ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಹಿರಿಯರು ಕಿರಿಯರೆನ್ನದೆ ಊರಿನ ಸಮಸ್ತರು ಒಟ್ಟಾಗಿ ಕಲೆತು ಊರಹಬ್ಬ ರೀತಿ ಈ ಹಬ್ಬ ಆಚರಿಸಿದರು.
ಹೊಸ ಸಂವತ್ಸರದ ಮೊದಲ ಹಬ್ಬವಾದ ಯುಗಾದಿಯ ೮ ನೇ ದಿನದ ನಂತರ ಆಚರಿಸುವ ರಾಮನವಮಿಯವರೆಗೆ ಗ್ರಾಮದಲ್ಲಿ ಎಲ್ಲರೂ ಮಡಿಯಾಗಿರುತ್ತಾರೆ. ಗ್ರಾಮದವರೆಲ್ಲ ಬಹುಪಾಲು ಮಂದಿ ತಿಂದುಣ್ಣುವವರಾದರೂ ೯ ದಿನದ ವರೆವಿಗೆ ಮಾಂಸಹಾರ ಗ್ರಾಮದಲ್ಲಿ ಕಡ್ಡಾಯವಾಗಿ ನಿಷೇಧಿಸಿ ವ್ರತ ಆಚರಿಸುತ್ತಾರೆ. ಪಕ್ಕದೂರಿನ ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮ ದೇವರುಗಳನ್ನು ಕರೆಸಿಕೊಂಡು ಪುಟ್ಟ ಜಾತ್ರೆಯ ರೀತಿ ಆಚರಿಸಿದರು.
ಉರಿ ಬಿಸಿಲಿನ ಝಳವನ್ನು ಲೆಕ್ಕಿಸದೆ ಗ್ರಾಮ ದೇವತೆಗಳು ಹಾಗೂ ರಾಮನ ಉತ್ಸವ ಮೂರ್ತಿಯೊಂದಿಗೆ ರಾಮಭಜನೆ ಮಾಡುತ್ತ ಹುಳಿಯಾರಿನ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಅಲ್ಲಿ ಪಾನಕಪನಿವಾರ ಹಂಚಿ ಮಂಗಳವಾದ್ಯದೊಂದಿಗೆ ಪುನಃ ಗ್ರಾಮಕ್ಕೆ ಆಗಮಿಸಿ ಗರುಡನಗುಡಿ, ಬಸವನ ಗುಡ್ಡೆ, ಮಾರುತಿ ಗುಡ್ಡೆಗಳಿಗೆ ಪೂಜೆ ಸಲ್ಲಿಸಿ ನಂತರ ಶ್ರೀಸ್ವಾಮಿಯವರ ಮೂಲಗುಡಿಯಲ್ಲಿ ಕೊಸಂಬರಿ ಪಾನಕ ಹಂಚಲಾಯಿತು.
ನಂತರ ನೂರೊಂದು ಎಡೆ ಸೇವೆ ಸಲ್ಲಿಸುವುದರೊಂದಿಗೆ ಮುಕ್ತಾಯವಾದ ಶ್ರೀರಾಮನವಮಿಯ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆವಿಗೂ ಗ್ರಾಮದ ಜನರೆಲ್ಲ ಒಟ್ಟಾಗಿ ಪಾಲ್ಗೊಂಡು ರಾಮಭಜನೆ ಮಾಡಿ ಭಕ್ತಿಭಾವದಲ್ಲಿ ಮಿಂದರು. ಅಕ್ಕಪಕ್ಕದ ಗ್ರಾಮಗಳ ಭಕ್ತರು ಇಲ್ಲಿನ ರಾಮನ ದೇವಸ್ಥಾನಕ್ಕೆ ತೆರಳಿ ಪುರುಷೋತ್ತಮ ರಾಮನ ದರ್ಶನ ಪಡೆದರು.