ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡಲು ಕ್ರಮವಹಿಸಿ

ಬೀದರ ಏ 08: ಬೀದರ ಜಿಲ್ಲೆಯಲ್ಲಿರುವ 944 ಲಿಂಗತ್ವ ಅಲ್ಪಸಂಖ್ಯಾತರಿಗೆ 2020ರ ನಿಯಮಾವಳಿಯ ಪ್ರಕಾರ ಗುರುತಿನ ಚೀಟಿ ಒದಗಿಸಲು ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಲಿಂಗತ್ವ ಅಲ್ಪಸಂಖ್ಯಾತರವರ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೈಗಾರಿಕಾ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇತ್ಯಾದಿ ಸಹಭಾಗೀದಾರ ಇಲಾಖೆಗಳು ಜೊತೆಗೂಡಿ ಆಯಾ ಇಲಾಖೆಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ಸಿಗುವಂತೆ ಕ್ರಮ ವಹಿಸಿ ಸದರಿಯವರು ಗೌರವಯುತವಾಗಿ ಸಮಾಜದಲ್ಲಿ ಬಾಳುವಂತೆ ಎಲ್ಲರೂ ಪ್ರಯತ್ನಿಸಬೇಕೆಂದು ತಿಳಿಸಿದರು.
ಟ್ರಾನ್ಸಜೆಂಡರ್ ಕಾರ್ಡ್ ನಮೂನೆಗಳು ಆನ್‍ಲೈನ್‍ನಲ್ಲಿ ಲಭ್ಯ ಇರುತ್ತದೆ. ಜಿಲ್ಲೆಯ ಅಲ್ಪಸಂಖ್ಯಾತರು ಈ ಸೌಕರ್ಯವನ್ನು ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದು ವಾರ್ತಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದ ಸಮಿತಿಯಿಂದ ಸ್ವೀಕೃತಗೊಂಡ ಟ್ರಾನ್ಸಜೆಂಡರ್ ಕಾರ್ಡ್ ನೀಡಲು ಕೋರಿದ ಅರ್ಜಿಗಳನ್ನು ಏಪ್ರೀಲ್ 25 ರೊಳಗಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗೆ ಸಲ್ಲಿಸಬೇಕು. ಅದೇ ರೀತಿ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಕೈಗೊಂಡು ಏಪ್ರೀಲ್ 31ರೊಳಗಾಗಿ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಅಳವಡಿಸಲು ಸೂಚಿಸಿದರು.
ಜಿಲ್ಲೆಯಲ್ಲಿನ 944 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ ಈಗಾಗಲೇ 10 ಲಿಂಗತ್ವ ಅಲ್ಪಸಂಖ್ಯಾತರಿಗೆ ಕೋವಿಡ್-19 ವ್ಯಾಕ್ಸಿನೇಶನ್ ಮಾಡಿಸಲಾಗಿದೆ. ಇನ್ನುಳಿದ 934 ಲಿಂಗತ್ವ ಅಲ್ಪಸಂಖ್ಯಾತರಿಗೆ ಕೂಡ ಕೋವಿಡ್ -19 ವ್ಯಾಕ್ಸಿನೇಶನ್ ಏಪ್ರೀಲ್ ತಿಂಗಳೊಳಗಾಗಿ ಮಾಡಿಸುವಂತೆ ಶರಣ ತತ್ವ ಗ್ರಾಮೀಣಾಭಿವೃದ್ಧಿ ಪ್ರಸಾರ ಸಂಸ್ಥೆ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೈಗಾರಿಕಾ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಪಿ.ಎಂ.ಇ.ಜಿ.ಪಿ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಿಕೊಡುವಂತೆ ಇದೆ ವೇಳೆ ಜಿಲ್ಲಾಧಿಕಾರಿಗಳು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಮಹಿಳಾ ಶಕ್ತಿ ಕೇಂದ್ರದವರಿಗೆ ನಿರ್ದೇಶನ: ಮಹಿಳಾ ಶಕ್ತಿ ಕೇಂದ್ರದ ಸಿಬ್ಬಂದಿಯು 4 ನಿಗಮಗಳಿಗೆ ಭೇಟಿ ನೀಡಿ 2019-20ನೇ ಸಾಲಿನ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಂಡ ಫಲಾನುಭವಿಗಳ ಮಾಹಿತಿಯ ಜೊತೆಗೆ ಮಹಿಳೆಯರ ಸಬಲೀಕರಣಗೋಸ್ಕರ ಇರುವ ವಿವಿಧ ಯೋಜನೆಗಳ ಮಾಹಿತಿಯನ್ನು ತುರ್ತಾಗಿ ಸಲ್ಲಿಸಲು ಕ್ರಮವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ಮಹಿಳಾ ಶಕ್ತಿ ಕೇಂದ್ರದ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎರಡು ದಿನಗಳ ಗಡುವು: ಮಾನ್ಯ ಸವೋಚ್ಛ ನ್ಯಾಯಾಲಯದ ತೀರ್ಪಿನಂತೆ ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಜಾರಿ ಮಾಡಲಾದ ಕರ್ನಾಟಕ ರಾಜ್ಯ ಟ್ರಾನ್ಸ್‍ಜೆಂಡರ್ಸ್ ನೀತಿ-2017ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದ ಸಮನ್ವಯ ಸಮಿತಿಯನ್ನು ರಚಿಸಿದಂತೆ ಎರಡು ದಿನಗಳೊಳಗೆ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರಿಗೆ ಗಡುವು ವಿದಿಸಿದರು.
ಮನೆ ಸೌಕರ್ಯ ಇರುವುದಿಲ್ಲ: ನಮಗೆ ವಾಸ ಮಾಡಲಿಕ್ಕೆ ಮನೆ ಸೌಕರ್ಯ ಇರುವುದಿಲ್ಲ. ಆದಕಾರಣ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಇದೆ ವೇಳೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾದ ಸುಮಲತಾ ಅವರು ಸಭೆಗೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ವಿಷಯದ ಕುರಿತು ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಲಿಂಗತ್ವ ಅಲ್ಪಸಂಖ್ಯಾತವರ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸದಸ್ಯರಾದ ವೈದ್ಯಾಧಿಕಾರಿಗಳಾದ ದೀಪಾ ಖಂಡ್ರೆ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದ ಹೊಸಮನಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರತಾಪೂರೆ ಹಾಗೂ ಇನ್ನೀತರರು ಇದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ್ಣ ಪಿ. ಸಿರಸಗಿ ಅವರು ಸ್ವಾಗತಿಸಿದರು. ಅಭಿವೃದ್ಧಿ ನಿರೀಕ್ಷಕರಾದ ಯಲ್ಲಮ್ಮ ಅವರು ವಂದಿಸಿದರು.