ಲಾಳಗೊಂಡ ಸಂಘದಿಂದ  ಅಭಿನಂಧನಾ ಸಮಾರಂಭ ರಾಮನಗೌಡರು ಮಾತು‌ ಕಠಿಣ, ಮೃದು ಹೃದಯಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.09: ಇಂದು ನಗರದ ಎಂ.ಆರ್.ವಿ ಲೇಔಟ್ ನಲ್ಲಿನ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಲಾಳಗೊಂಡ ಸಂಘದಿಂದ ಲಾಳಗೊಂಡ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷ ಬ್ಯಾಲಚಿಂತೆ ಆರ್.ರಾಮನಗೌಡ ಮತ್ತು ಕಾರ್ಯದರ್ಶಿ ಹೆಚ್.ಎಂ.ಗುರುಸಿದ್ದಸ್ವಾಮಿ  ಅವರ ಅಭಿನಂದನಾ ಸಮಾರಂಭ ನಡೆಯಿತು.
ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸನ್ಮಾನದ ನಂತರ ಸಮಾರಂಭವನ್ನು ಉದ್ದೇಶಿಸಿ ರಾಜ್ಯ ಲಾಳಗೊಂಡ ಸಂಘದ ರಾಜ್ಯ ಅಧ್ಯಕ್ಷ  ಅರವಿ ಬಸವನಗೌಡ ಅವರು‌ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ವರ್ಗಗಳು ಆಗುವುದು ಸಹಜ. ನಂತರ ನಾವೆಲ್ಲಾ ಒಂದೇ. ರಾಮನಗೌಡರ ಮಾತು ಕಠಿಣ ಆದರೂ, ಹೃದಯ ಮೃದು, ಪ್ರಾಮಾಣಿಕ ವ್ಯಕ್ತಿ. ಅವರು ಅಧ್ಯಕ್ಷರಾಗಿದ್ದು ಸಮುದಾಯದ ಗೌರವ ಹೆಚ್ಚಿದೆ. ಇದು ಒಂದು ಅವಕಾಶ ಎಂದರು.  ವೀರಶೈವ ವಿದ್ಯಾವರ್ಧಕ ಸಂಘಕ್ಕೆ 107 ವರ್ಷದ ಇತಿಹಾಸದಲ್ಲಿ ಲಾಳಗೊಂಡ ಸಮುದಾಯದ ಮೊದಲ ಅಧ್ಯಕ್ಷರಾಗಿದ್ದು ಒಂದು ಇತಿಹಾಸ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಕಾರ್ಯದರ್ಶಿ ಹೆಚ್.ಎಂ.ಗುರುಸಿದ್ದಸ್ವಾಮಿ, ಇದು ಸಮುದಾಯದ ಜಾಗೃತಿ ಸಭೆ ಎನ್ನಬಹುದು. ಆದರೂ ಅನೇಕ ದಾನಿಗಳು ಕೊಡುಗೆಯಿಂದ ಹುಟ್ಟಿಕೊಂಡಿರುವ ವೀರಶೈವ ವಿದ್ಯಾವರ್ಧಕ ಸಂಘದ ಅಭಿವೃದ್ಧಿಗಾಗಿ, ನಾವು ರಾಜಕಾರಣಿಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲೀಕರಣ ಆಗಬೇಕಿದೆಂದರು.
ಸಮಾರಂಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ದರೂರು ಶಾಂತನಗೌಡ ಮಾತನಾಡಿ, ಈವರೆಗೆ ಲಾಳಗೊಂಡ ಸಮುದಾಯಕ್ಕೆ ಅಧ್ಯಕ್ಷತೆ ದೊರಕಿರಲಿಲ್ಲ. ಸಾಮಾಜಿಕ ನ್ಯಾಯದಡಿ ರಾಮನಗೌಡರು ಅಧ್ಯಕ್ಷರಾಗಿದ್ದು ಸಂತಸದ ವಿಷಯ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಕೋರಿ ವಿರೂಪಾಕ್ಷಪ್ಪ ಮಾತನಾಡಿ, ಬಸವಣ್ಣನ ವಚನದಂತೆ ಇವನಾರವ, ಇವನಾರವ ಎಂಬ ಮನೋಭಾವದಿಂದ ದೂರ ಇರುವಂತಹ ಎಲ್ಲರನ್ನೂ ಸಮಾನರಾಗಿ ಕಾಣುವ, ಸರಳ ಸಾಮಾನ್ಯ, ಪ್ರಾಮಾಣಿಕ ವ್ಯಕ್ತಿ ರಾಮನಗೌಡರು ಸಂಘದ ಅಧ್ಯಕ್ಷರಾಗಿದ್ದು ಸಂಘಕ್ಕೆ ಮಾದರಿಯಾಗಲಿದ್ದಾರೆಂದರು.
ಮತ್ತೋರ್ವ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಮಲ್ಲನಗೌಡ ಮಾತನಾಡಿ, ವೀರಶೈವ ಸಮದಾಯದ ಎಲ್ಲಾ ಪಂಗಡಗಳು ಒಂದಾಗಿದೆ ಎಂಬುದಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆಂದರು.
ಕಂತೆ ಭಿಕ್ಷೆ ಮಾಡಿ ಓದಿಕೊಂಡು ಬದುಕಿದ ನನ್ನನ್ನು ವೀರಶೈವ ತರುಣ ಸಂಘಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು. 
ಸಾಮಾಜಿಕ ನ್ಯಾಯಕ್ಕೆ ನಾನು ಸಾಕ್ಷಿಯಾಗಿದ್ದೇನೆ ಎಂದು ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ ಅಭಿಪ್ರಾಯ ಪಟ್ಟರು. 
ಪ್ರಾಸಾವಿಕವಾಗಿ ಮಾತನಾಡಿದ  ಪತ್ರಕರ್ತ ಶಶಿಧರ ಮೇಟಿ. ಶೈಕ್ಷಣಿಕ ಅಭಿವೃದ್ಧಿಗೆ ಸಂಘದ ಕೊಡುಗೆ ಮಹತ್ವದ್ದು. ಇಲ್ಲಿ ಲಾಳಗೊಂಡ ಸಮುದಾಯದಿಂದ ಕಾರ್ಯಕ್ರಮ ಇದ್ದರೂ, ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳ ಸಹಕಾರ ಇದ್ದರೆ ಮಾತ್ರ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.
ಗಂಟಲು ನೋವಿನಿಂದ ರಾಮನಗೌಡರು ಮಾತನಾಡಲಿಲ್ಲ. ಲಾಳಗೊಂಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಗೌಡ,
ವೀರಶೈವ ವಿದ್ಯಾವರ್ಧಕ ಸಂಘದ  ಕಾರ್ಯಕಾರಿ ಸಮಿತಿ ಸದಸ್ಯರಾದ ಯಾಳ್ಪಿ ಪಂಪನಗೌಡ, ಕೆರೆನಳ್ಳಿ ಚಂದ್ರಶೇಖರ್, ಎಸ್.ಮಲ್ಲನಗೌಡ, ಕಿರಣ್ ಕುಮಾರ್, ಟಿ.ಸಿ.ವಿರೂಪಾಕ್ಷಗೌಡ,  ಅವರು ವೇದಿಕೆಯಲ್ಲಿದ್ದರು.ಶರಣಕುಮಾರ್ ಸ್ವಾಗತಿಸಿದರು.