ಲಾಲ್ ಸಲಾಂ’ ನಲ್ಲಿ ಮೊಹಿದ್ದೀನ್ ಭಾಯ್ ಆಗಿ ತಲೈವಾ

ಸೂಪರ್ ಸ್ಟಾರ್ ರಜನಿಕಾಂತ್  ” ಲಾಲ್ ಸಲಾಂ” ಚಿತ್ರದಲ್ಲಿ ಮೊಹಿದ್ದೀನ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಲೈವಾ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲು ಮುಂದಾಗಿದ್ದಾರೆ

ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ “ಲಾಲ್ ಸಲಾಂ”. ಈ ಚಿತ್ರದಲ್ಲಿ ತಲೈವಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಅಭಿನಯದ ಹೊಸ‌ಚಿತ್ರದ  ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು  ರಜನಿಯ ಹೊಸ ಅವತಾರ ನೋಡಿ ಅಭಿಮಾನಿಗಳು  ಫಿದಾ ಆಗಿದ್ದಾರೆ.

ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರದಲ್ಲಿ ರಜನಿಕಾಂತ್ ಮೊಹಿದ್ದೀನ್ ಭಾಯ್ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಶೇರ್ವಾನಿ ಉಡುಪು ಧರಿಸಿ ಸನ್‌ಗ್ಲಾಸ್ ತೊಟ್ಟು  ತಲೆಗೆ ಟೋಪಿ ಹಾಕಿ ಎಂಟ್ರಿಕೊಟ್ಟಿರುವ ಸೂಪರ್ ಸ್ಟಾರ್ ಗೆಟಪ್ ಅಭಿಮಾನಿಗಳಷ್ಟೇ ಅಲ್ಲ ಸಾಮಾನ್ಯ ಜನರನ್ನು ಆಕರ್ಷಿಸುತ್ತಿದೆ.

ವಿಷ್ಣು ವಿಶಾಲ್ ಮತ್ತು ವಿಕ್ರಾಂತ್  ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರದಲ್ಲಿ ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ, ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ.  ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

ಇಂಡಿಯನ್, ಕೈದಿ ನಂಬರ್-150, 2.0 ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹೌಸ್ ಲಾಲ್ ಸಲಾಂ ಚಿತ್ರ ನಿರ್ಮಾಣ ಮಾಡುತ್ತಿದೆ. ಸದ್ಯ ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ.