ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 17 :-ಮಗಳನ್ನು ನೋಡಲು ಪತ್ನಿಯೊಂದಿಗೆ ಬೈಕಿನಲ್ಲಿ ಅಮಲಾಪುರದಿಂದ ಉಜ್ಜಿನಿಗೆ ಹೋಗಿ ಬರುವಾಗ ಬಣವಿಕಲ್ಲು ಗ್ರಾಮದ ಹತ್ತಿರ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಆತನ ಪತ್ನಿ ತೀವ್ರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಜರುಗಿದೆ.
ತಾಲೂಕಿನ ಅಮಲಾಪುರ ಗ್ರಾಮದ ಚಿನ್ನಾಪುರಣ್ಣರ ಬಸವರಾಜ (55) ಮೃತ ದುರ್ದೈವಿಯಾಗಿದ್ದು ಈತನ ಪತ್ನಿ ಸುಮಕ್ಕ (47)ತೀವ್ರಗಾಯಗೊಂಡಿದ್ದು ಬಳ್ಳಾರಿ ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಅಮಲಾಪುರದಿಂದ ಉಜ್ಜಯಿನಿಯ ಮಗಳ ಮನೆಗೆ ಶುಕ್ರವಾರ ಬೆಳಿಗ್ಗೆ ಬೈಕ್ ನಲ್ಲಿ ಪತ್ನಿಯೊಂದಿಗೆ ತೆರಳಿದ್ದ ಬಸವರಾಜ, ಸಂಜೆ ವಾಪಸ್ ಅಮಲಾಪುರಕ್ಕೆ ವಾಪಸ್ಸು ಬರುವಾಗ ಬಣವಿಕಲ್ಲು ಸಮೀಪದ ಮಲಿಯಮ್ಮ ದೇವಸ್ಥಾನದ ಬಳಿ ಬೃಂದಾವನ ಕಂಪನಿಯ ಪೈಪುಗಳನ್ನು ತರುತ್ತಿದ್ದ ಲೋಡ್ ಲಾರಿ ಪಾಲಯ್ಯನಕೋಟೆಗೆ ಹೋಗುವಾಗ ಸೂಲದಹಳ್ಳಿ ಕ್ರಾಸ್ ಬಳಿ ಎದುರಿಗೆ ಬಂದ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕಾನಹೊಸಹಳ್ಳಿ ಠಾಣೆ ಪಿಎಸ್ಐ ಎರಿಯಪ್ಪ ಅಂಗಡಿ ಹಾಗೂ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.