ಲಾರಿ-ಬಸ್ ಅಪಘಾತ: ಚಾಲಕ ಸಜೀವ ದಹನ

ನೆಲ್ಯಾಡಿ ಸಮೀಪ ತಡರಾತ್ರಿ ನಡೆದ ಘಟನೆ: ಪ್ರಯಾಣಿಕರು ಪಾರು
ನೆಲ್ಯಾಡಿ, ಮಾ.೨೫- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಬಳಿ ಕಂಟೈನರ್ ಲಾರಿ ಮತ್ತು ಖಾಸಗಿ ಬಸ್ ನಡುವೆ ಅಪಘಾತ ನಡೆದಿದ್ದು, ಈ ವೇಳೆ ಬಸ್ ಹಾಗೂ ಕಂಟೈನರ್ ಲಾರಿ ಬೆಂಕಿಗಾಹುತಿಯಾಗಿ ಲಾರಿ ಚಾಲಕ ಸಜೀವ ದಹನಗೊಂಡ ಘಟನೆ ತಡರಾತ್ರಿ ಸಂಭವಿಸಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್ ಮತ್ತು ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಮುಖಾಮುಖಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿ ಎರಡೂ ವಾಹನಗಳು ಸುಟ್ಟು ಭಸ್ಮವಾಗಿದ್ದು, ಲಾರಿ ಚಾಲಕ ಮಾತ್ರ ಲಾರಿಯೊಳಗೆ ಸಿಲುಕಿ ಹೊರಬರಲಾಗದೆ ಸಜೀವ ದಹನವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.