ಲಾರಿ ಡಿಕ್ಕಿ: ಅಂಗಡಿ, ವಾಹನಗಳಿಗೆ ಹಾನಿ

ಮಂಗಳೂರು, ಎ.೨೨- ನಿಂತಿದ್ದ ಲಾರಿಯೊಂದು ಹಠಾತ್ ಚಲಿಸಿದ ಪರಿಣಾಮ ಕೋಳಿ ಅಂಗಡಿ ಹಾಗೂ ವಾಹನಗಳಿಗೆ ಹಾನಿಯಾದ ಘಟನೆ ಇಂದು (ಗುರುವಾರ) ಬೆಳಗ್ಗೆ ನಗರದ ಕಂಕನಾಡಿ ಮಾರುಕಟ್ಟೆಯ ಬಳಿ ನಡೆದಿದೆ.
ಆ?ಯಂಟನಿ ಕಂಪೆನಿಗೆ ಸೇರಿದ ಈ ತ್ಯಾಜ್ಯ ವಿಲೇವಾರಿ ಲಾರಿಯನ್ನು ಚಾಲಕ ನಿಲ್ಲಿಸಿ ಸ್ವಲ್ಪ ದೂರ ಹೋಗಿದ್ದು, ಈ ಸಂದರ್ಭ ಲಾರಿಯು ಏಕಾಏಕಿ ಚಲಿಸಿ ಮೂರು ಕಾರು, ಎರಡು ದ್ವಿಚಕ್ರ ವಾಹನ, ಒಂದು ಟೆಂಪೋಗೆ ಢಿಕ್ಕಿ ಹೊಡೆದಿದೆ. ಅಲ್ಲದೆ ಸಮೀಪದ ಕೋಳಿ ಅಂಗಡಿಗೂ ಢಿಕ್ಕಿ ಹೊಡೆದಿದೆ. ಇದರಿಂದ ಒಂದು ದ್ವಿಚಕ್ರ ವಾಹನ ಅಪ್ಪಚ್ಚಿಯಾದರೆ ಕೋಳಿ ಅಂಗಡಿಯ ಜನರೇಟರ್‌ಗೆ ಹಾನಿಯಾಗಿದೆ. ಘಟನೆ ನಡೆಯುವಾಗ ಅಲ್ಲೇ ಇದ್ದ ಲಾರಿ ಚಾಲಕ ಬಳಿಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಮಧ್ಯೆ ಲಾರಿ ಚಾಲಕ ಸ್ಥಳಕ್ಕೆ ಆಗಮಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.