ಲಾರಿ ಚಾಲಕರ ಪ್ರತಿಭಟನೆಗೆ ಬಿಎಸ್ಪಿ ಪಕ್ಷ ಬೆಂಬಲ

ರಾಯಚೂರು,ಜ.೧೭- ಹಿಟ್ ಆಂಡ್ ರನ್ ಕಾನೂನು ವಿರೋಧಿಸಿ ಲಾರಿ ಚಾಲಕರು ಪ್ರತಿಭಟನೆಗೆ ಬಹುಜನ ಸಮಾಜ ಪಕ್ಷ ಬೆಂಬಲಿಸುತ್ತದೆ ಎಂದು ಬಹುಜನ ಸಮಾಜದ ಪಕ್ಷ ಜಿಲ್ಲಾ ಉಸ್ತುವಾರಿ ಜೈ. ಭೀಮ್ ವಲ್ಲಭ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಉದ್ದೇಶಿತ ಕಾನೂನನ್ನು ಸಾರಿಗೆ ವಲಯದ ಪ್ರತಿನಿಧಿಗಳೊಂದಿಗೆ ಯಾವುದೇ ಸಮಲೋಚನೆಯಿಲ್ಲದೆ ಪರಿಚಯಿಸಲಾಗಿದೆ. ಪ್ರಸ್ತಾವಿತ ಕಾನೂನಿನಲ್ಲಿ ಕೆಲ ಲೋಪಗಳಿವೆ. ದೇಶದಲ್ಲಿ ಸಾರಿಗೆ ಉದ್ಯಮವು ಶೇ.೨೭ರಷ್ಟು ಚಾಲಕರ ಕೊರತೆಯನ್ನು ಎದುರಿಸುತ್ತಿದೆ. ಹೀಗಿರುವಾಗ ಕಠಿಣ ಕಾನೂನಿನ ಭೀತಿಗೆ ಚಾಲಕ ವೃತ್ತಿಗೆ ಪ್ರವೇಶಿಸಲು ಹಿಂದೆಟ್ಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರದ ಹಿಟ್ ಆಂಡ್ ರನ್ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಅಪಘಾತವಾದರೆ ೧೦ ವರ್ಷಗಳ ಜೈಲು ಶಿಕ್ಷೆ ಸೇರಿದಂತೆ ಕಟ್ಟುನಿಟ್ಟಾದ ನಿಬಂಧನೆಗಳು ಚಾಲಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ದೇಶದಲ್ಲಿ ಅಪಘಾತ ತನಿಖಾ ಪ್ರೋಟೋಕಾಲ್‌ನ ಸಂಪೂರ್ಣ ಕೊರತೆ ಇದೆ. ಅಪಘಾತದ ಸಮಯದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪರಿಗಣಿಸದೇ ಭಾರಿ ವಾಹನಗಳು ಎಂಬ ಕಾರಣಕ್ಕೆ ಸುಖಾಸುಮ್ಮನೆ ದೂಷಿಸಲಾಗುತ್ತಿದೆ. ಇಂತಹ ಕಾನೂನುಗಳನ್ನು ತಂದರೆ ಪರ್ಯಾಯ ಉದ್ಯೋಗಗಳನ್ನು ಹುಡುಕಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಇಂತಹ ಡ್ರೈವರ್ ಗಳಿಗೆ ಮರಣ ಶಾಸನದಂತಹ ಕಾನೂನಿನಿಂದ ದೇಶದ ಆರ್ಥಿಕತೆ ಮತ್ತು ಜನರ ಜೀವನ ಸಾಗಿಸುವ ದೈನಂದಿನ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.ಆದ್ದರಿಂದ ಹಿಟ್ ಆ?ಯಂಡ್ ರನ್ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ದೇಶಾದ್ಯಂತ ಬಹುಜನ ಸಮಾಜದ ಪಕ್ಷದಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬುಡ್ಡೆಪ್ಪ , ಈರಣ್ಣ ದೊರೆ, ಸೈಯದ್ ಅಬ್ದುಲ್ಲ, ನರಸಿಂಹಲು ಸೇರಿದಂತೆ ಇತರರು ಉಪಸ್ಥಿತರಿದ್ದರು.