ಲಾರಿ-ಕಾರು ಮಧ್ಯೆ ಡಿಕ್ಕಿ: ಒಂದೇ ಕುಟುಂಬದ ೬ ಜನ ದುರ್ಮರಣ


ಗುರುಮಠಕಲ್,ಆ.೫-ತಾಲ್ಲೂಕಿನ ಅರಕೇರಾ (ಕೆ) ಬಳಿ ತಡರಾತ್ರಿ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ೬ ಜನರು ಮೃತಪಟ್ಟಿದ್ದಾರೆ.
ಜವಳ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಮರಳುವಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಮಹ್ಮದ್ ವಾಜೀದ್ ಹುಸೇನ್(೩೯), ಮಹ್ಮದ್ ಮಜರ್ ಹುಸೇನ್(೭೯), ನೂರ್ ಜಹಾನ್ ಬೇಗಂ(೭೦), ಹೀನಾ ಬೇಗಂ(೩೦), ಇಮ್ರಾನ್(೨೨) ಮತ್ತು ಉಮೇಜಾ (೬ತಿಂಗಳು) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಬಾಲಕ ಮಹ್ಮದ್ ಪಾಜೀಲ್ ಹುಸೇನ್‌ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲರೂ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ತೆಲಂಗಾಣದ ಕೊಡಂಗಲ್ ಸಮೀಪದ ದರ್ಗಾದಲ್ಲಿ ಮಗಳ ಜವಳ ಕಾರ್ಯಕ್ರಮ ಮುಗಿಸಿಕೊಂಡು ಹಟ್ಟಿ ಗ್ರಾಮಕ್ಕೆ ವಾಪಸ್ ಬರುವಾಗ ದುರಂತ ಸಂಭವಿಸಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಗುರುಮಠಕಲ್ ಪಿ.ಎಸ್.ಐ ದೌವಲತ್ ಕುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.