ಕಾರು ಧಗ ಧಗ
ಬೆಂಗಳೂರು,ಅ.೩- ರಾಜಧಾನಿಯ ತಲಘಟ್ಟಪುರದ ಬಳಿ ಇಂದು ನಸುಕಿನಲ್ಲಿ ಭೀಕರ ಅಪಘಾತ ಸಂಭವಿಸಿದೆ, ನೈಸ್ ರಸ್ತೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ, ತಾಯಿ- ಇಬ್ಬರೂ ಮಕ್ಕಳು ಸಜೀವ ದಹನಗೊಂಡು ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣ ಮಾಡುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಮೂಲತಃ ತಮಿಳುನಾಡಿನ ಸೇಲಂ ಮೂಲದ ಮಹೇಂದ್ರನ್- ಸಿಂಧು ಕುಟುಂಬ ರಾಮಮೂರ್ತಿ ನಗರದ ವಿಜಿನಾಪುರ ನಿವಾಸಿಗಳಾಗಿದ್ದರು.
ಗಾಂಧಿ ಜಯಂತಿಗೆ ನಿನ್ನೆ ರಜೆ ಇದ್ದಿದ್ದರಿಂದ ಟಾಟಾ ನೆಕ್ಸಾನ್ ಕಾರನ್ನು ಅನ್ ಲೈನ್ ನಲ್ಲಿ ಕುಟುಂಬವು ಬಾಡಿಗೆ ಪಡೆದಿದ್ದು,ಮಹೇಂದ್ರನ್ ಅವರು ತಾವೇ ಚಾಲನೆ ( ಸೆಲ್ಫ್ ಡ್ರೈವ್) ಮಾಡಿಕೊಂಡು ರಾತ್ರಿ ನಾಗಸಂದ್ರದ ಐಕಿಯಾ ಮಾಲ್‌ಗೆ ಶಾಪಿಂಗ್‌ಗಾಗಿ ಹೋಗಿದ್ದರು. ಬಳಿಕ ಹಾಗೇ ಕಾರಿನಲ್ಲಿ ಸುತ್ತಾಡಿಕೊಂಡು ತಡರಾತ್ರಿ ನೈಸ್ ರೋಡಿಗೆ ಇಳಿದು ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತ್ತಿದ್ದರು.
ಬಾಟಲಿ ರೂಪದ ಯಮ:
ದುರದೃಷ್ಟವಶಾತ್ ಈ ಕುಟುಂಬಕ್ಕೆ ನೀರಿನ ಬಾಟಲಿಯ ರೂಪದಲ್ಲಿ ಸಾವು ಎದುರಾಗಿದೆ. ಕಾರಿನ ಫ್ಲೋರ್‌ನಲ್ಲಿ ಉರುಳಾಡುತ್ತಿದ್ದ ವಾಟರ್ ಬಾಟೆಲ್ ಕಾಲಿನ ಕೆಳಗೆ ಬಂದಿದೆ. ಸೋಮಪುರ ಬಳಿ ನೀರಿನ ಬಾಟಲ್ ತೆಗೆದುಕೊಳ್ಳಲು ಡ್ರೈವ್ ಮಾಡುತ್ತಿದ್ದ ಮಹೇಂದ್ರನ್ ಕೆಳಗೆ ಬಾಗಿದ್ದರು. ಕೆಳಗೆ ಬಗ್ಗಿ ಬಾಟಲಿ ತೆಗೆಯುವ ಯತ್ನದಲ್ಲಿದ್ದಾಗ ಕಾರು ಅಪಘಾತಕ್ಕೊಳಗಾಗಿದೆ.
ರಸ್ತೆಯ ಬಲಗಡೆಗೆ ಕಾರು ಹೋಗಿದ್ದು, ಸುಟ್ಟುಹೋಗಿದೆ. ಎಡಗಡೆಯಲ್ಲಿ ಒಂದು ಲಾರಿ ಪಲ್ಟಿಯಾಗಿದ್ದು, ಇದಕ್ಕೂ ಕಾರು ಅಪಘಾತಕ್ಕೂ ಸಂಬಂಧವಿದೆಯೇ ಎಂಬುದು ತನಿಖೆಯಾಗುತ್ತಿದೆ.
ಇಬ್ಬರು ಸಜೀವ ದಹನ:
ಕಾರು ರಸ್ತೆಯಿಂದ ಹೊರಬಂದು ಲಾರಿ ಮತ್ತು ಮೋರಿಯ ಗೋಡೆಗೆ ಡಿಕ್ಕಿಯಾಗಿದೆ. ಲಾರಿಯೂ ಸಹ ಪಲ್ಟಿಯಾಗಿದೆ. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಸಿಂಧು ಮತ್ತು ಇಬ್ಬರು ಹೆಣ್ಣು ಮಕ್ಕಳಲ್ಲಿ ಕಿರಿಯ ಮಗಳು ಕಾರಿನಲ್ಲಿ ಸುಟ್ಟುಹೋದರೆ ಮತ್ತೊಬ್ಬ ಮಗಳು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಮೇಲ್ನೋಟಕ್ಕೆ ನಿಯಂತ್ರಣ ತಪ್ಪಿ ಅಪಘಾತ ಆಗಿದೆ ಅನಿಸುತ್ತಿದೆ. ಲಾರಿಗೆ ಡಿಕ್ಕಿಯಾದಾಗ ಕಾರಿನ ಡೀಸೆಲ್ ಟ್ಯಾಂಕ್ ಲೀಕ್ ಆಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮೃತರಾಗಿದ್ದಾರೆ. ಎಫ್‌ಎಸ್‌ಎಲ್ ಸಿಬ್ಬಂದಿ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ.
ತಂದೆ ಚಿಂತಾಜನಕ:
ಘಟನೆಯಲ್ಲಿ ಮಹೇಂದ್ರನ್ ಕಾಲು ಸುಟ್ಟು ಹೋಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಅವರ ಬ್ಲಡ್ ಸ್ಯಾಂಪಲ್ ಪಡೆದಿದ್ದೇವೆ ಎಂದು ಘಟನಾಸ್ಥಳಕ್ಕೆ ಭೇಟಿ ನೀಡಿರುವ ದಕ್ಷಿಣ ವಿಭಾಗ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ಅಪಘಾತಕ್ಕೊಳಗಾದ ಕಾರು ಚಲಾಯಿಸುತ್ತಿದ್ದ ತಂದೆಯ ಸ್ಥಿತಿ ಚಿಂತಾಜನಕವಾಗಿದೆ, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ
ತನಿಖೆ ನಡೆಸುತ್ತಿದ್ದಾರೆ.