ಲಾರಿ-ಕಾರು ಡಿಕ್ಕಿ ನಾಲ್ವರ ಸಾವು

ಮಂಡ್ಯ,ಜೂ.೪-ಲಾರಿ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಇಂದು ನಸುಕಿನಲ್ಲಿ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ತಿರುಮಲಪುರ ಗೇಟ್ ಬಳಿ ನಡೆದಿದೆ.
ನೆಲಮಂಗಲದ ಹೇಮಂತ್, ಶರತ್, ನವೀನ್ ಮೃತಪಟ್ಟಿರುವ ದುರ್ದೈವಿಗಳು.ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ರಭಸಕ್ಕೆ ಈ ನಾಲ್ವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಲಾರಿ ಹಿಂಬದಿಯಲ್ಲಿ ಕಾರು ಕೂಡ ಮೈಸೂರಿಗೆ ಹೊರಟಿತ್ತು.
ಮಾರ್ಗ ಮಧ್ಯೆ ತಿರುಮಲಪುರ ಗೇಟ್ ಬಳಿ ಬೆಳಗಿನ ಜಾವ ೫ ಗಂಟೆ ಸಮಯದಲ್ಲಿ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ನುಜ್ಜುಗುಜ್ಜಾಗಿ ಪಕ್ಕದಲ್ಲಿನ ಹಳ್ಳಕ್ಕೆ ಬಿದ್ದಿದ್ದ ಕಾರು ನುಜ್ಜುಗುಜ್ಜಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಘಟನೆ ಬಳಿಕ ಪರಾರಿಯಾಗಿರುವ ಲಾರಿ ಚಾಲಕನ ಬಂಧನಕ್ಕೆ ಶೋಧ ನಡೆಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.