ಲಾರಿ ಅಪಘಾತ : ಓರ್ವ ಸಾವು, ಮೂವರಿಗೆ ಗಾಯ

ಧಾರವಾಡ, ಮೇ 27: ಎರೆಡು ಲಾರಿಗಳು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಇಲ್ಲಿನ ಹಳೇ ಡಿಎಸ್‍ಪಿ ಕಛೇರಿ ವೃತ್ತದ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಮೋನಯ್ಯ ಗವಿಸಿದ್ದಯ್ಯ ಅಮೋಘಿಮಠ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಬಾಬು ಮಹ್ಮದ ಮುಲ್ಲಾ, ಅಭಿಷೇಕ ಹಿತ್ತಲಮನಿ ಹಾಗೂ ಅರ್ಬಾಜ ಶೇಖ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಪೂನಾದಿಂದ ಬರುತ್ತಿದ್ದ ಈರುಳ್ಳಿ ತುಂಬಿದ ಲಾರಿಯು, ಖಾಲಿ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಸವದತ್ತಿ ರಸ್ತೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿಯ ಚಾಲಕ ಗವಿಸಿದ್ದಯ್ಯ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಅಪಘಾತ ಸ್ಥಳಕ್ಕೆ ಧಾವಿಸಿದ ಧಾರವಾಡ ಸಂಚಾರಿ ಪೊಲೀಸರು ಮೂವರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.