ಲಾರಿಗಳ ನಡುವೆ ಡಿಕ್ಕಿ:ಇಬ್ಬರು ಚಾಲಕರ ಸಜೀವ ದಹನ

ಕಲಬುರಗಿ,ನ.22-ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡು ಇಬ್ಬರೂ ಚಾಲಕರು ಸಜೀವವಾಗಿ ದಹನವಾದ ಹೃದಯ ವಿದ್ರಾವಕ ಘಟನೆ ಶಹಾಬಾದ ತಾಲ್ಲೂಕಿನ ತೊನಸಳ್ಳಿ ಹತ್ತಿರ ಭಾನುವಾರ 6.30ರ ಸುಮಾರಿಗೆ ನಡೆದಿದೆ.
ಸಜೀವವಾಗಿ ದಹನಗೊಂಡ ಲಾರಿ ಚಾಲಕರನ್ನು ಶಹಾಬಾದ ಮಡ್ಡಿಯ ಇಂದಿರಾ ನಗರದ ಖಾಜಾ ಮೈನೂದ್ದೀನ್ ತಂದೆ ದವಲಸಾಬ್(36) ಮತ್ತು ಅಫಜಲಪುರ ತಾಲ್ಲೂಕಿನ ಚಿಣಮಗೇರಿ ಗ್ರಾಮದ ಸಿದ್ದಪ್ಪ ಈರಣ್ಣ ಕಂಟಿಕಾರ (22) ಎಂದು ಗುರುತಿಸಲಾಗಿದೆ.
ಒಂದು ಲಾರಿ ಚಿಕ್ಕೋಡಿಯಿಂದ ಸಕ್ಕರೆ ತುಂಬಿಕೊಂಡು ಹೈದ್ರಾಬಾದಗೆ, ಇನ್ನೊಂದು ಲಾರಿ ಲಿಕ್ಕರ್ (ಮದ್ಯ) ತೆಗೆದುಕೊಂಡು ನಂದೂರದಿಂದ ಕೊಪ್ಪಳಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ.
ಸಕ್ಕರೆ ತುಂಬಿದ್ದ ಲಾರಿಯನ್ನು ಸಿದ್ದಪ್ಪ ಕಂಟಿಕಾರ, ಲಿಕ್ಕರ್ ತುಂಬಿದ್ದ ಲಾರಿಯನ್ನು ಖಾಜಾ ಮೈನೂದ್ದೀನ್ ಅವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಅಗ್ನಿ ಶಾಮಕದಳದ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿ ರಾತ್ರಿ 10 ರವರೆಗೆ ಬೆಂಕಿ ನಂದಿಸಿವೆ. ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.