ಲಾಭದ ನೆಪದಲ್ಲಿ ವಂಚನೆ ಖಾಸಗಿ ಕಂಪನಿ ನಿರ್ದೇಶಕ ಸೆರೆ


ಬೆಂಗಳೂರು,ಜೂ.೫- ಸಾರ್ವಜನಿಕರಿಗೆ ಲಾಭದ ಆಮಿಷವೊಡ್ಡಿ ಸದಸ್ಯತ್ವದ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ ನಿರ್ದೇಶಕ ಕೆ.ವಿ. ಜಾನಿ ಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವೇಶ್ವರನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಕೆ.ವಿ. ಜಾನಿ(೫೧) ಬಸವೇಶ್ವರನಗರದಲ್ಲಿ ಕಚೇರಿ ತೆರೆದು ಆರೋಪಿಯುಸಾರ್ವಜನಿಕರಿಗೆ ಸದಸ್ಯತ್ವ ನೀಡುತ್ತಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬೇರೆಯವರನ್ನೂ ಚೈನ್ ಲಿಂಕ್ ರೀತಿಯಲ್ಲಿ ಸದಸ್ಯರನ್ನಾಗಿ ಮಾಡಿದರೆ ಕಮಿಷನ್ ನೀಡುವುದಾಗಿಯೂ ಹೇಳಿ ನಂಬಿಕೆ ಹುಟ್ಟಿಸಿ ವಂಚನೆ ನಡೆಸುತ್ತಿದ್ದ
’ಜಾ ಲೈಫ್ ಸ್ಟೈಲ್ ಹೆಸರಿನ ಜಾಲತಾಣದ ಮೂಲಕ ಆರೋಪಿ ವಹಿವಾಟು ನಡೆಸುತ್ತಿದ್ದ. ಕಂಪನಿ ಸದಸ್ಯತ್ವಕ್ಕೆಂದು ೧,೧೦೯ ರೂ ಪಡೆಯುತ್ತಿದ್ದ. ಸಮಯ ಸಿಕ್ಕಾಗಲೆಲ್ಲ ಅರ್ಧ ಗಂಟೆ ಜಾಹೀರಾತು ನೋಡಿದರೆ, ದಿನಕ್ಕೆ ೨೪೦ ರೂ ಸಿಗುತ್ತದೆ.
ಇದೇ ರೀತಿಯಲ್ಲಿ ನಿತ್ಯವೂ ಜಾಹೀರಾತು ವಿಡಿಯೊ ನೋಡಿದರೆ, ಪ್ರತಿ ತಿಂಗಳು ೭,೨೦೦ರಿಂದ ೮೬,೪೦೦ರವರೆಗೂ ಹಣ ಸಂಪಾದಿಸಹುದು. ಹಣವೂ ಆನ್‌ಲೈನ್ ಮೂಲಕವೇ ಖಾತೆಗೆ ಜಮೆ ಆಗುವುದೆಂದು ಆರೋಪಿ ಹೇಳುತ್ತಿದ್ದ ಎಂದು ತಿಳಿಸಿದರು’
ಆರೋಪಿ ಮಾತು ನಂಬಿದ್ದ ೪ ಲಕ್ಷ ಮಂದಿ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದ್ದರು. ಆದರೆ, ಇತ್ತೀಚಿಗೆ ಆರೋಪಿ ಯಾವುದೇ ಹಣ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ನೊಂದ ಸಾರ್ವಜನಿಕರು, ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡು ಮಾಹಿತಿಯನ್ನು ಪಡೆದು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಲಕ್ಷಾಂತರ ರೂಪಾಯಿ ವಂಚನೆಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.