ಲಾಥಮ್, ಕೇನ್ ಅಬ್ಬರ ಭಾರತ ತತ್ತರ: ಕಿವೀಸ್ ಗೆ 7 ವಿಕೆಟ್ ಭರ್ಜರಿ ಜಯ

ಆಕ್ಲೆಂಡ್‌, ನ.25-ಟಾಮ್ ಲಾಥಮ್ ಭರ್ಜರಿ ಶತಕ ಹಾಗೂ ನಾಯಕ ಕೇನ್ ವಿಲಿಯಮ್ಸ್ ನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್,
ಭಾರತದ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಏಳು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 1-0 ಯಿಂದ ಮುನ್ನಡೆ ಸಾಧಿಸಿದೆ.
ಇಂದು ಆಕ್ಲೆಂಡ್‌ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇನ್ನೂ 17 ಎಸೆತಗಳು ಬಾಕಿಯಿರುವಾಗಲೇ ನ್ಯೂಜಿಲೆಂಡ್ ಗೆಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟ್ ‌ಮಾಡಿದ ಭಾರತ,50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು.
ಶಿಖರ್ ಧವನ್ 72 ಶುಭಮನ್ ಗಿಲ್ 50 ರನ್ ಗಳಿಸಿ ಮೊದಲ ವಿಕೆಟ್ ಗೆ 124 ಗಳಿಸಿತು. ಬಳಿಕ ಶ್ರೇಯಸ್ ಅಯ್ಯರ್ ಬಿರುಸಿನ ಆಟವಾಡಿ 80 ರನ್ ಬಾರಿಸಿ ತಂಡದ ಮೊತ್ತ ಕಲೆಹಾಕಲು ನೆರವಾದರು. ಪಂತ್ 15 ಹಾಗೂ ಸೂರ್ಯಕುಮಾರ್ 4 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಸಂಜು ಸಾಮ್ಸನ್ 36 ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 37ರನ್ ಗಳಿಸಿದರು.
ಟಿಮ್ ಸೌಥಿ ಹಾಗೂ ಫರ್ಗೂಸನ್ ತಲಾ ಮೂರು ವಿಕೆಟ್ ಪಡದು ಯಶಸ್ವಿ ಬೌಲರ್ ಎನಿಸಿದರು.
307 ರನ್ ಗಳ ಗುರಿ ಬೆನಹತ್ತಿದ್ದ ನ್ಯೂಜಿಲೆಂಡ್, ಫಿನ್ ಅಲೆನ್ 22 ಹಾಗೂ ಡೆವೀನ್ ಕಾನ್ವೆ 24 ರನ್ ಗಳಿಸಿ ನಿರ್ಗಮಿಸಿದರು. ನಂತರ ಆಡಲು ಬಂದ ಡರೇನ್ ಮಿಚೆಲ್ 11 ರನ್ ಗಳಿಸಿ ವಿಕೆಟ್ಒಪ್ಪಿಸಿದರು.
ನಂತರ ಜತೆಗೂಡಿದ ಲಥಾಮ್ ಹಾಗೂ ವಿಲಿಯಮ್ಸ್ ನ್ ಭಾರತದ ಬೌಲಿಂಗ್ ದಾಳಿಯನ್ನು ದೂಳಿಪಟ‌ ಮಾಡಿದರು. 4ನೇ ವಿಕೆಟ್ ಗೆ 221 ರನ್ ಕಲೆಹಾಕಿದರು.
ಲಥಾಮ್ 104 ಎಸೆತಗಳಲ್ಲಿ 19 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 145 ರನ್ ಚಚ್ಚಿದರೆ. ನಾಯಕ ವಿಲಿಯಮ್ಸ್ ನ್ ಅಜೇಯ 94 ರನ್ ಬಾರಿಸಿದರು. ಬೃಹತ್ ಮೊತ್ತ ಗಳಿಸಿದ್ದರೂ ಭಾರತ ಸೋಲು ಅನುಭವಿಸಬೇಕಾಯಿತು. ನ.27 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ.