ಲಾಡಗೇರಿ ಮಠದಲ್ಲಿ ರೇಣುಕಾಚಾರ್ಯ ಯುಗಮಾನೋತ್ಸವ: ಸನ್ಮಾನ

ಬೀದರ:ಮಾ.28: ಹೈದ್ರಾಬಾದ್ ರಸ್ತೆಯಲ್ಲಿರುವ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಮಹಾ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಅರ್ಥಪೂರ್ಣವಾಗಿ ಜರುಗಿತು.

ಹಿರಿಯ ಸಾಹಿತಿ ಎಮ್.ಜಿ ದೇಶಪಾಂಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಇವತ್ತು ಪೂಜ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವ ಇರುವ ಕಾರಣವಾಗಿ ಅಲೆಮಾರಿ ಜನಾಂಗದ ಮಕ್ಕಳಿಗೆ ಮಾಸ್ಕ್ ಹಾಗೂ ಹಣ್ಣುಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿರುವುದು ಸ್ವಾಗತಾರ್ಹ ಎಂದರು.

ವಿಜ್ಞಾನ ಶಿಕ್ಷಕ ಸಂಜೀವಕುಮಾರ ಸ್ವಾಮಿ ಮಾತನಾಡಿ, ರೇಣುಕಾಚಾರ್ಯರು ಮಾನವ ಧರ್ಮವೇ ಶ್ರೇಷ್ಠವೆಂದು ಮಾನವೀಯ ಮೌಲ್ಯಗಳನ್ನು ಬೆಳೆಸಿದವರು .ವೀರಶೈವ ಧರ್ಮವನ್ನು ಉಜ್ವಲಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ರಾಷ್ಟ್ರೀಯ ಯುವ ಪ್ರಶದ್ತಿ ಪುರಸ್ಕøತ ಶಿವಯ್ಯ ಸ್ವಾಮಿ ರಾಮಾಯಣ ಕಾಲದ ಘಟನೆ ನೆನಪಿಸುತ್ತ, ಯುದ್ಧ ಭೂಮಿಯಲ್ಲಿ ಶ್ರೀ ರಾಮಚಂದ್ರನ ಬಾಣಗಳಿಂದ ಪೆಟ್ಟು ತಿಂದು ರಾವಣನು ಮರಣಾವಸ್ಥೆಯಲ್ಲಿದ್ದಾಗ ತನ್ನ ತಮ್ಮ ವಿಬಿಷಣನನ್ನು ಕುರಿತು ಈ ವಿಭಿಷಣನೇ 9 ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ನಾನು ಸಂಕಲ್ಪ ಮಾಡಿ ಈಗಾಗಲೇ 6 ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ್ದೇನೆ. ಆದರೆ ನನ್ನ ಸಂಕಲ್ಪದ ಪ್ರಕಾರ ಇನ್ನು ಮೂರು ಕೋಟಿ ಶಿವಲಿಂಗಗಳನ್ನು ಸ್ಥಾಪಿಸುವದಿದೆ. ಅವುಗಳನ್ನು ನೀನು ಪ್ರತಿಷ್ಠಾಪಿಸು ಎಂದು ಹೇಳಿ ಪ್ರಾಣಬಿಟ್ಟನು. ಅಣ್ಣನ ಸಂಕಲ್ಪವನ್ನು ಹೇಗೆ ಪೂರ್ಣ ಮಾಡಬೇಕೆಂದು ಚಿಂತಿಸುತ್ತಿರುವಾಗ ಅವನ ಪುಣ್ಯವೇನೋ ಎಂಬಂತೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಆಕಾಶ ಮಾರ್ಗವಾಗಿ ಲಂಕೆಗೆ ಆಗಮಿಸುತ್ತಾರೆ. ಅವರ ಮಹಿಮೆಯನ್ನರಿತ ವಿಭಿಷಣನು ವಿಧಿವತ್ತಾದ ಭಕ್ತಿ -ಗೌರವಪೂರ್ವಕ ಪಾದಪೂಜೆ ಮಾಡಿ ತನ್ನ ಅಣ್ಣ ರಾವಣನ ಸಂಕಲ್ಪವನ್ನು ನಿವೇದಿಸಿಕೊಂಡಾಗ ಪೂಜ್ಯರು ಅದೇ ಕ್ಷಣದಲ್ಲಿ 3 ಕೋಟಿ ಆಚಾರ್ಯರೂಪ ಧರಿಸಿ 3 ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿ ವಿಭಿಷಣನಿಗೆ ಅಭಯಾಶೀರ್ವಾದವನ್ನಿತ್ತರು. ಇದೇನೂ ಕಾಲ್ಪನಿಕ ಅಥವಾ ಪುರಾಣ ಕತೆಯಲ್ಲ. ಲಂಕಾದ (ಸಿಂಹಳದ) ಜಾಪ್ನಾದಿಂದ 15 ಕಿ.ಮೀ ದೂರವಿರದ ಕಿರುಮಲಾಯ ಎಂಬ ಗ್ರಾಮದಲ್ಲಿರುವ ರೇಣುಕಾಶ್ರಮ ಮತ್ತು ರೇಣುಕವನ ಮಠಗಳು ಹಾಗೂ ಅಲ್ಲಿರುವ ನೂರಾರು ವೀರಶೈವರ ಮನೆಗಳು ಈ ಐತಿಹಾಸಿಕ ಘಟನೆಯ ಪ್ರತ್ಯಕ್ಷ ನಿರ್ದೇಶನಗಳಾಗಿವೆ ಎಂದು ವಿವರಿಸಿದರು.

ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ಡಾ ರಾಜ್ ಕುಮಾರ್ ಹೆಬ್ಬಾಳೆ ಮಾತನಾಡಿ, ದ್ವಾಪರ ಯುಗದಲ್ಲಿ ಮಲಯ ಪರ್ವತದಲ್ಲಿ ವಾಸಿಸುತ್ತಿದ್ದ ಮಹಾಮಹಿಮರಾದ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಸಿದ್ದಾಂತ ಉಪದೇಶ ಮಾಡಿದರು. ಆ ಉಪದೇಶವನ್ನೇ ಶ್ರೀ ಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಬರೆದದ್ದೇ ವೀರಶೈವ ಧರ್ಮಗ್ರಂಥ ಸಿದ್ದಾಂತ ಶಿಖಾಮಣಿ ಎಂದು ಪ್ರಸಿದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯ ಹಲವು ಕಡೆಯಿಂದ ಆಗಮಿಸಿದ ವೈದಿಕರಿಗೆ ಹಾಗೂ ಮಂದಿರಗಳ ಅರ್ಚಕರಿಗೆ ಸನ್ಮಾನಿಸಲಾಯಿತು. ನಂತರ ಭಜನಾ ಕಾರ್ಯಕ್ರಮ ಜರುಗಿ ತದನಂತರ ಮಹಾಪ್ರಸಾದ ವಿತರಿಸಲಾಯಿತು. ಸಮಾಜ ಸೇವಕ ಅರವಿಂದ ಕುಲಕರ್ಣಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಿವ್ಯ ಸಾನಿಧ್ಯವನ್ನು ಲಾಡಗೇರಿ ಹಿರೇಮಠದ ಪೂಜ್ಯ ಗಂಗಾಧರ ಶಿವಾಚಾರ್ಯರು ವಹಿಸಿದ್ದರು.